6 ಲಕ್ಷ ಆಸ್ತಿ ತೆರಿಗೆ ವ್ಯಾಪ್ತಿಗೆ ತರಲು ಖಾಸಗಿ ರಸ್ತೆಗಳು ಸರ್ಕಾರಿ ವ್ಯಾಪ್ತಿಗೆ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

KannadaprabhaNewsNetwork |  
Published : Mar 25, 2025, 02:16 AM ISTUpdated : Mar 25, 2025, 08:09 AM IST
ನಗರ | Kannada Prabha

ಸಾರಾಂಶ

ಆಸ್ತಿ ತೆರಿಗೆ ವ್ಯಾಪ್ತಿಗೆ ಆಸ್ತಿಗಳನ್ನು ತರಲು ಖಾಸಗಿ ರಸ್ತೆಗಳನ್ನು ಸರ್ಕಾರದ ಆಸ್ತಿ ಎಂದು ಘೋಷಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು : ಬಿಬಿಎಂಪಿ ವ್ಯಾಪ್ತಿ ಯಲ್ಲಿ ಅಕ್ರಮ ನಿರ್ಮಾಣಗಳ ಪತ್ತೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆ ಮಾಡಲಾಗುವುದು. ಬಾಕಿ ಇರುವ ಆರು ಲಕ್ಷಕ್ಕೂ ಹೆಚ್ಚು ಮನೆ, ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕಂದಾಯ ಬಡಾವಣೆಗಳಲ್ಲಿನ ಖಾಸಗಿ ರಸ್ತೆಗಳನ್ನೂ ಸರ್ಕಾರಿ ರಸ್ತೆಗಳೆಂದು ಘೋಷಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್ 2025-26 ನೇ ಸಾಲಿನ ಬಿಬಿಎಂಪಿ ಬಜೆಟ್ ಕುರಿತು ಬೆಂಗಳೂರು ನಗರದ ಶಾಸಕರ ಜತೆ ಸೋಮವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಗರದ ಸುಮಾರು 7 ಲಕ್ಷ ಮನೆಗಳು ತೆರಿಗೆ ಕಟ್ಟಿರಲಿಲ್ಲ, ಇವುಗಳಲ್ಲಿ 1 ಲಕ್ಷ ಮನೆಗಳು ತೆರಿಗೆ ವ್ಯಾಪ್ತಿಗೆ ಬಂದಿದ್ದು, ಇನ್ನೂ 6 ಲಕ್ಷ ಮನೆಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕಿದೆ. ಆದ ಕಾರಣ ಒಂದು ಬಾರಿ ಪಾವತಿಗೆ ಅವಕಾಶ (ಓಟಿಎಸ್) ಮಾಡಿಕೊಡಲಾಯಿತು. ಅಕ್ರಮ ನಿರ್ಮಾಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಪಾಲಿಕೆಗೆ ಇರಲಿಲ್ಲ. ಕಳೆದ ವಾರ ಸದನದಲ್ಲಿ ಈ ಬಗ್ಗೆ ವಿಧೇಯಕ ಕೂಡ ಅಂಗೀಕಾರವಾಗಿದೆ. ಇತ್ತೀಚೆಗೆ ಅನೇಕ ದಂಡ ಶುಲ್ಕಗಳ ಮೊತ್ತವನ್ನು ಕೂಡ ಕಡಿಮೆ ಮಾಡಲಾಗಿದೆ. 

ನಗರದ ವ್ಯಾಪ್ತಿಯ ಎಲ್ಲಾ ಮನೆಗಳು ತೆರಿಗೆ ವ್ಯಾಪ್ತಿಗೆ ಬರಲೇಬೇಕು, ಅವರು ತೆರಿಗೆ ಕಟ್ಟಲೇಬೇಕು. ಇದರಲ್ಲಿ ರಾಜಿಯಾಗುವುದಿಲ್ಲ. ಇದೆಲ್ಲದರ ಜೊತೆಗೆ ಕಂದಾಯ ಬಡಾವಣೆಗಳಲ್ಲಿ ಇರುವ ಖಾಸಗಿ ರಸ್ತೆಗಳನ್ನೂ ಸಹ ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಲಾಗುವುದು ಎಂದರು.ಅಕ್ರಮ ನಿರ್ಮಾಣ ಪತ್ತೆಗೆ ಎಐ ಬಳಕೆನಗರದಲ್ಲಿ ಅನೇಕ ಮಂದಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚು ವಿಸ್ತೀರ್ಣದ ಹಾಗೂ ಮಹಡಿಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ. ಇಂತಹ ಅಕ್ರಮಗಳನ್ನು ‘ಎಐ’ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ಕಟ್ಟಡವನ್ನು ಎಷ್ಟು ವಿಸ್ತೀರ್ಣ, ಎತ್ತರ ಕಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ಜತೆಗೆ ಪ್ರತಿಯೊಂದು ಮನೆಯ ದಾಖಲೆಯೂ ಸಿಗುತ್ತದೆ ಎಂದು ಡಿ.ಕೆ.ಶಿವಕುಮಾರ್‌ ವಿವರಿಸಿದರು. 

ಏಪ್ರಿಲ್‌ನಿಂದ ಮನೆ ಬಾಗಿಲಿಗೆ ಉಚಿತ ಖಾತೆ

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಗೆ ತಂದಿರುವ ಮನೆ ಬಾಗಿಲಿಗೆ ಉಚಿತ ಖಾತೆ ನೀಡುವ ವಿನೂತನ ಕಾರ್ಯಕ್ರಮಕ್ಕೆ ಏಪ್ರಿಲ್‌ನಿಂದ ಚಾಲನೆ ದೊರೆಯಲಿದೆ. ಪ್ರತಿಯೊಂದು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಅಕಸ್ಮಾತ್ ಯಾರದ್ದಾದರೂ ದಾಖಲೆಗಳು ತಪ್ಪಿಹೋಗಿದ್ದಲ್ಲಿ ಅಂತವರು ಮತ್ತೆ ನೀಡಬಹುದು. ಬೆಂಗಳೂರು ನಗರದ ಪ್ರತಿ ಕ್ಷೇತ್ರದ ಶಾಸಕರ ಬಳಿ ಮಾತನಾಡಿ, ಕ್ಷೇತ್ರವಾರು ಕಾರ್ಯಕ್ರಮ ನಡೆಸಿ ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಶೀಘ್ರ ಬಿಬಿಎಂಪಿ ಬಜೆಟ್‌

ಬಿಬಿಎಂಪಿ ಚುನಾವಣೆಯನ್ನು ಆದಷ್ಟು ಶೀಘ್ರದಲ್ಲಿಯೇ ನಡೆಸಲು ಸರ್ಕಾರ ತಯಾರಿ ಮಾಡಿಕೊಂಡಿದೆ ಎಂದು ಡಿ.ಕೆ.ಶಿವಕುಮಾರ್‌ ಉತ್ತರ ನೀಡಿದರು.

ಕಳೆದ ಐದು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆಯದ ಬಗ್ಗೆ ಕೇಳಿದಾಗ, ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಇದರ ಬಗ್ಗೆ ವಿಪಕ್ಷಗಳು ಜಂಟಿ ಸದನ ಸಮಿತಿ ರಚಿಸುವಂತೆ ಮನವಿ ಮಾಡಿದ್ದವು. ಈಗಾಗಲೇ ಅನೇಕರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ರಾಜ್ಯಪಾಲರು ಎಷ್ಟು ಬೇಗ ಸಹಿ ಹಾಕಿ ಕಳುಹಿಸುತ್ತಾರೋ ಅಷ್ಟು ಬೇಗ ಪ್ರದೇಶಗಳನ್ನು ಗುರುತಿಸಿ, ಶಾಸಕರ ಬಳಿ ಮತ್ತೊಮ್ಮೆ ಚರ್ಚಿಸಿ ಚುನಾವಣೆಗೆ ತೆರಳುತ್ತೇವೆ. 73, 74ನೇ ತಿದ್ದುಪಡಿ ಬಗ್ಗೆ ನಮಗೆ ಬದ್ಧತೆಯಿದೆ ಎಂದರು.

ಅಧಿಕಾರಿಗಳ ಅಮಾನತು

ಮನೆ, ನಿವೇಶನ ಮಾಲೀಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ಕಂದಾಯ ಬಡಾವಣೆ ಅಕ್ರಮಗಳಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರೆ ಅಂತಹವರನ್ನು ನನ್ನ ಗಮನಕ್ಕೆ ತರದೆ ಕೂಡಲೇ ಅಮಾನತು ಮಾಡಿ ಎಂದು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇನೆ.

-ಡಿ.ಕೆ.ಶಿವಕುಮಾರ್‌, ಡಿಸಿಎಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ