ಕನ್ನಡಪ್ರಭ ವಾರ್ತೆ ಬೆಂಗಳೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರೊಂದಿನ ಸಭೆಯಲ್ಲಿ ಮಾನ್ಯತೆ ನವೀಕರಣ ವಿಚಾರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ಕರಾಳ ದಿನ ಆಚರಿಸಲು ಕೈಗೊಂಡಿದ್ದ ನಿರ್ಧಾರವನ್ನು ಖಾಸಗಿ ಶಾಲಾ ಸಂಘಟನೆಗಳು ಕೈಬಿಟ್ಟಿವೆ.ಕರ್ನಾಟಕ ಖಾಸಗಿ ಶಾಲಾ ಬೋಧಕ, ಬೋಧಕೇತರ ವರ್ಗಗಳ ಸಮನ್ವಯ ಸಮಿತಿಯನ್ನು ರಚಿಸಿಕೊಂಡಿರುವ ಕ್ಯಾಮ್ಸ್, ಕುಸ್ಮಾ, ಮಿಕ್ಸಾ ಸೇರಿದಂತೆ ಇತರೆ ಒಂಬತ್ತು ಖಾಸಗಿ ಶಾಲಾ ಸಂಘಟನೆಗಳು, ಮಾನ್ಯತೆ ನವೀಕರಣಕ್ಕೆ ವಿಧಿಸಿರುವ ಕಠಿಣ ಮಾನದಂಡಗಳ ಸಡಿಲಿಸಬೇಕೆಂಬುದು ಸೇರಿದಂತೆ ಖಾಸಗಿ ಶಾಲೆಗಳ ಬೇಡಿಕೆ, ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಆಗಸ್ಟ್ 15ರಂದು ಕರಾಳ ದಿನ ಆಚರಿಸುವುದಾಗಿ ಘೋಷಿಸಿದ್ದವು. ಆದರೆ, ಇದಕ್ಕೆ ಪೋಷಕರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಸಂಚಾಲಕ ಡಿ.ಶಶಿಕುಮಾರ್, ಸಚಿವರ ಸಭೆಯಲ್ಲಿ ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತೆ, ಭೂ ಪರಿವರ್ತನೆ ವಿಚಾರ ಮಾತ್ರವಲ್ಲದೆ ಇನ್ನಿತರೆ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಏನು ಮಾಡಬೇಕೆಂಬ ಬಗ್ಗೆ ಚರ್ಚಿಸಲಾಯಿತು. ಇತರೆ ಇಲಾಖೆಗಳಿಂದ ವಿಧಿಸಿರುವ ಮಾನದಂಡಗಳ ಪರಿಷ್ಕರಣೆ ಕುರಿತು ಸಂಬಂಧಿಸಿದ ಸಚಿವರುಗಳೊಂದಿಗೆ ಸಮನ್ವಯ ಸಭೆ ನಡೆಸುತ್ತೇನೆ. ಯಾವ್ಯಾವ ಮಾನದಂಡಗಳಿಗೆ ಈ ವರ್ಷ ರಿಯಾಯಿತಿ ಕೊಡಬಹುದು ಎಂಬುದನ್ನು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಮಾನ್ಯತೆ ನವೀಕರಣಕ್ಕೆ ಇರುವ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಒಂದೆರಡು ತಿಂಗಳಲ್ಲಿ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಹಾಗಾಗಿ ನಾವು ಕರಾಳ ದಿನ ಆಚರಣೆ ಕೈಬಿಟ್ಟಿದ್ದೇವೆ ಎಂದು ತಿಳಿಸಿದರು.