ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ತಾಕೀತು
ಕನ್ನಡಪ್ರಭ ವಾರ್ತೆ ರಾಯಚೂರುಶೇ.100 ರಷ್ಟು ಕನ್ನಡ ಅನುಷ್ಠಾನಕ್ಕೆ ಅಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡಬೇಕು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಾಕೀತು ಮಾಡಿದರು.
ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಅವರು ಮಾತನಾಡಿದರು.ಮಾತೃ ಭಾಷೆ ಕನ್ನಡ ಉಳಿಸಿ ಬೆಳೆಸುವ ಬಹುದೊಡ್ಡ ಜವಾಬ್ದಾರಿ ಇಂದು ಆಡಳಿತ ನಡೆಸುತ್ತಿರುವ ಅಧಿಕಾರಿ-ಸಿಬ್ಬಂದಿ ಮೇಲಿದ್ದು, ಸರ್ಕಾರಿ ಆದೇಶವೆಂದು ಕನ್ನಡ ಬಳಸದೆ ಅದು ನಮ್ಮ ಭಾಷೆ ಎಂದು ಅನುಷ್ಠಾನಕ್ಕೆ ತರಬೇಕು, ಸರ್ಕಾರಿ ಸೌಲಭ್ಯ ಪಡೆಯಲು ಜನರು ಸರ್ಕಾರಿ ಕಚೇರಿಗೆ ಬರುತ್ತಾರೆ. ಅವರೊಂದಿಗೆ ಕನ್ನಡದಲ್ಲಿಯೆ ಮಾತನಾಡಿ ವ್ಯವಹರಿಸಬೇಕು. ಕಚೇರಿ ನಾಮಫಲಕ ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಡಿಸಿ ನಿತೀಶ ಕೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗೂರು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.
ಅ.5 ಕ್ಕೆರಾಯಚೂರಿನಲ್ಲಿ ಸಮಾವೇಶ: ಬರುವ ಅಕ್ಟೊಬರ್ 5 ರಂದು ಗೋಕಾಕ್ ಚಳುವಳಿ ಕುರಿತು ಹೊಸ ಜನಾಂಗಕ್ಕೆ ಪರಿಚಯಿಸುವ ಕುರಿತು ರಾಯಚೂರಿನಲ್ಲಿ ದೊಡ್ಡಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಭಾಗಿಯಾಗುತ್ತಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲಾ ಅಧಿಕಾರಿಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಮುಖಂಡರು ಸಹಕಾರ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಿಳಿಮಲೆ ಮನವಿ ಮಾಡಿದರು.