ಹೋರಾಟಗಾರರ ಮನವೊಲಿಕೆ, ರಸ್ತೆ ಅಗಲೀಕರಣ ಹೋರಾಟ ವಾಪಸ್‌

KannadaprabhaNewsNetwork | Published : Aug 14, 2024 1:03 AM

ಸಾರಾಂಶ

ಅಗಲೀಕರಣ ಪ್ರಕ್ರಿಯೆ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಆದರೆ ಸ್ವಾತಂತ್ರ್ಯೋತ್ಸವದಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈಬಿಡುವಂತೆ ತಹಸೀಲ್ದಾರ್‌ ಫೈರೋಜ್ ಸೋಮನಕಟ್ಟಿ ಮನವಿ ಮಾಡುವ ಹೋರಾಟಗಾರರ ಮನವೊಲಿಸುವಲ್ಲಿ ಯಶಸ್ವಿಯಾದರು.

ಬ್ಯಾಡಗಿ:ಅಗಲೀಕರಣ ಪ್ರಕ್ರಿಯೆ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಆದರೆ ಸ್ವಾತಂತ್ರ್ಯೋತ್ಸವದಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈಬಿಡುವಂತೆ ತಹಸೀಲ್ದಾರ್‌ ಫೈರೋಜ್ ಸೋಮನಕಟ್ಟಿ ಮನವಿ ಮಾಡುವ ಹೋರಾಟಗಾರರ ಮನವೊಲಿಸುವಲ್ಲಿ ಯಶಸ್ವಿಯಾದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ತಹಸೀಲ್ದಾರ್‌ ಅವರು, ಆ.15 ಸ್ವಾತಂತ್ರ್ಯೋತ್ಸವ ದಿನವಾಗಿದ್ದು ರಾಷ್ಟ್ರಕ್ಕೊಂದು ನಮನ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಆದರೆ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ರಸ್ತೆಯಲ್ಲಿ ಗುಂಡಿ ತೆಗೆದು ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವಿರಿ, ಇದರಿಂದ ರಾಷ್ಟ್ರಕ್ಕೆ ಅಗೌರವ ತೋರಿದಂತಾಗಲಿದೆ, ಪ್ರತಿಭಟನೆ ಮಾಡುವುದು ನಿಮ್ಮ ಹಕ್ಕು ಆದರೆ ಅಂದು ನಡೆಸಲುದ್ದೇಶಿಸಿರುವ ಪ್ರತಿಭಟನೆ ಕೈಬಿಡುವುದು ಹೆಚ್ಚು ಸೂಕ್ತ ಎಂದು ಮನವಿ ಮಾಡಿದರು.

ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಅಧಿಕಾರಿಗಳ ವಿಳಂಬ ನೀತಿಯಿಂದ ರಸ್ತೆ ಅಗಲೀಕರಣ ಕಾಮಗಾರಿಗೆ ಹಿನ್ನಡೆಯಾಗುತ್ತಿದೆ. ನ್ಯಾಯಾಲಯದಲ್ಲಿ ಯಾವುದೇ ಮೊಕದ್ದಮೆಗಳಿಲ್ಲ ಹೀಗಿದ್ದರೂ ಅಗಲೀಕರಣಕ್ಕೆ ಮುಂದಾಗದೇ ಸಾರ್ವಜನಿಕರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ, ನಿಮ್ಮಂತಹ ಅಧಿಕಾರಿಗಳಿಂದ ಕಳೆದ 15 ವರ್ಷಗಳ ಹೋರಾಟಕ್ಕೆ ಹಿನ್ನಡೆಯಾಗುತ್ತಿದೆ. ದೇಶದ ಬಗ್ಗೆ ನಮಗೂ ಗೌರವವಿದೆ, ನಿಮ್ಮ ವಿಳಂಬ ನೀತಿಯನ್ನು ಖಂಡಿಸಿ ಸ್ವಾತಂತ್ರ್ಯ ದಿನದಂದು ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ತಹಸೀಲ್ದಾರ್‌ ಮನವಿ ಮೇರೆಗೆ ಆ.15 ಸ್ವಾತಂತ್ರೋತ್ಸವ ದಿನ ಹಮ್ಮಿಕೊಂಡಿದ್ದ ಮುಖ್ಯರಸ್ತೆ ಬಂದ್ ಚಳುವಳಿ ಕೈಬಿಡಲಾಗಿದ್ದು, ಮುಂದಿನ ಹೋರಾಟ ಕುರಿತು ಸಭೆಯ ಬಳಿಕ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಜೈಲಿಗೂ ಹೋಗಲು ಸಿದ್ಧ: ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ವಿನಾಯಕ ಕಂಬಳಿ ಮಾತನಾಡಿ, ವರ್ಷಗಳಿಂದ ಅನಧಿಕೃತ ಕಟ್ಟಡ ಸೇರಿದಂತೆ 85 ವರ್ಷ ಮೀರಿದ ಕಟ್ಟಡಗಳನ್ನು ಶಿಥಿಲಗೊಳಿಸಲು ಹಿರಿಯ ಅಧಿಕಾರಿಗಳಿಂದ ಸೂಚನೆ ಸಿಕ್ಕಿದ್ದರೂ ಸಹ ಮುಖ್ಯಾಧಿಕಾರಿಗಳು ಕಾರ್ಯೋನ್ಮುಖವಾಗಿಲ್ಲ ರಸ್ತೆ ಕಾಮಗಾರಿ ಆರಂಭಿಸದಿದ್ದರೇ ಪ್ರತಿಭಟನೆ ತೀವ್ರಗೊಳಿಸಿಯೇ ತೀರುತ್ತೇವೆ ಇದಕ್ಕಾಗಿ ಜೈಲಿಗೂ ಹೋಗಲು ಸಿದ್ಧವಿರುವುದಾಗಿ ಎಚ್ಚರಿಸಿದರು. ಸಭೆಯಲ್ಲಿ ಪಿಡಬ್ಲುಡಿ ಎಂಜಿನಿಯರ್‌ ಉಮೇಶ ನಾಯಕ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಪಿಎಸ್ಐ ಅರವಿಂದ , ರಸ್ತೆ ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, ನ್ಯಾಯವಾದಿ ನಿಂಗಪ್ಪ ಬಟ್ಟಲಕಟ್ಟಿ, ಎಂ.ಎಲ್. ಕಿರಣಕುಮಾರ, ಪಾಂಡುರಂಗ ಸುತಾರ, ಪರೀಧಾಭಾನು ನದಿಮುಲ್ಲಾ, ಶಿವಯೋಗಿ ಗಡಾದ ಇದ್ದರು.

Share this article