ವಿದ್ಯುತ್ ಖಾಸಗೀಕರಣವಾದ್ರೆ ರಕ್ತಪಾತ

KannadaprabhaNewsNetwork |  
Published : Oct 31, 2024, 12:46 AM IST
30ಕೆಡಿವಿಜಿ2-ದಾವಣಗೆರೆ ರೈತರ ಭ‍ವನದಲ್ಲಿ ಬುಧವಾರ ರೈತ, ಕಾರ್ಮಿಕರ ಸಂಯುಕ್ತ ಹೋರಾಟ ಕರ್ನಾಟಕ ಹಮ್ಮಿಕೊಂಡಿದ್ದ ಸಂಘಟನಾ ಸಮಾವೇಶ ಉದ್ಘಾಟಿಸಿದ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ. | Kannada Prabha

ಸಾರಾಂಶ

ಸಮಾವೇಶವನ್ನು ರೈತ ಸಂಘ- ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲಿ ವಿದ್ಯುತ್ ಕ್ಷೇತ್ರ ಖಾಸಗೀಕರಣದಿಂದ ಭವಿಷ್ಯದಲ್ಲಿ ರೈತರಿಗೆ ಮರಣ ಶಾಸನವಾಗಲಿದೆ. ವಿದ್ಯುತ್ ಖಾಸಗೀಕರಣ ಕಾಯ್ದೆ ಜಾರಿಗೊಂಡಿದ್ದೇ ಆದರೆ ರಕ್ತಪಾತವೇ ಆಗಲಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್‌. ಬಸವರಾಜಪ್ಪ ಸರ್ಕಾರಕ್ಕೆ ಎಚ್ಚರಿಸಿದರು.

ನಗರದ ಎಪಿಎಂಸಿ ರೈತ ಭವನದಲ್ಲಿ ಬುಧವಾರ ರೈತ, ಕಾರ್ಮಿಕರ ಸಂಯುಕ್ತ ಹೋರಾಟ ಕರ್ನಾಟಕ ಹಮ್ಮಿಕೊಂಡಿದ್ದ ಸಂಘಟನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯುತ್ ಕ್ಷೇತ್ರವನ್ನೂ ಖಾಸಗೀಕರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಪರಮಾಪ್ತ ಬಂಡವಾಳ ಶಾಹಿಗಳಿಗೆಲ್ಲಾ ಅನುಕೂಲ, ಲಾಭ ಮಾಡಿಕೊಡುವ ಹುನ್ನಾರ ನಡೆಸಿದ್ದಾರೆ ಎಂದು ಟೀಕಿಸಿದರು.

ವಿದ್ಯುತ್ ಖಾಸಗೀಕರಣಗೊಂಡರೆ ಗೃಹ ಬಳಕೆ, ವಾಣಿಜ್ಯ ಬಳಕೆ, ನೀರಾವರಿಗೆ ಬಳಸುವ ವಿದ್ಯುತ್‌ ಅನ್ನು ಮೊಬೈಲ್‌ಗೆ ಕರೆನ್ಸಿ ಹಾಕುವ ಮಾದರಿಯಲ್ಲಿ ಪಡೆಯಬೇಕಾದೀತು. ವಿದ್ಯುತ್ ಖರೀದಿಗೆ ಕಂಪನಿಗಳನ್ನು ಸಹ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ವಿದ್ಯುತ್ ಖಾಸಗೀಕರಣ ವಿರುದ್ಧ ಪ್ರಬಲ ಹೋರಾಟ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಭಾರತ ಕಮ್ಯುನಿಷ್ಟ್ ಪಕ್ಷದ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಮಾತನಾಡಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಕುರುವ ಗಣೇಶ, ಅರುಣಕುಮಾರ ಕುರುಡಿ, ಬುಳ್ಳಾಪುರ ಹನುಮಂತಪ್ಪ, ಗುಮ್ಮನೂರು ಬಸವರಾಜ, ಕೆಪಿಆರ್‌ಎಸ್‌ ಜಿಲ್ಲಾ ಸಂಚಾಲಕ ಈ.ಶ್ರೀನಿವಾಸ, ಕಾರ್ಮಿಕ ಮುಖಂಡ ಆನಂದರಾಜ, ಆವರಗೆರೆ ಚಂದ್ರು, ಮಂಜುನಾಥ ಕೈದಾಳೆ, ಪವಿತ್ರಾ, ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಇತರರು ಇದ್ದರು.

ದೇಶಾದ್ಯಂತ ರ್ಯಾಲಿ

ಕೇಂದ್ರ, ರಾಜ್ಯ ಸರ್ಕಾರಗಳು ಸಮಾನವಾಗಿ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಉಭಯ ಸರ್ಕಾರಗಳ ಇಂತಹ ರೈತವಿರೋಧಿ ನೀತಿ, ಕಾಯ್ದೆ ವಿರೋಧಿಸಿ ನ.26ರಂದು ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರೈತ, ಕಾರ್ಮಿಕರು, ಜನಸಾಮಾನ್ಯರು ಬೃಹತ್ ರ್ಯಾಲಿ ನಡೆಸುವ ಮೂಲಕ ಆಯಾ ಜಿಲ್ಲಾಧಿಕಾರಿ ಮುಖಾಂತರ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಅರ್ಪಿಸಲು ನಿರ್ಧರಿಸಲಾಗಿದೆ. ಅದೊಂದು ಐತಿಹಾಸಿಕ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳಿಗೆ ಚುರುಕು ಮುಟ್ಟಿಸುವಂತಹ ಹೋರಾಟವೂ ಆಗಿರಲಿದೆ ಎಂದು ಬಸವರಾಜಪ್ಪ ಹೇಳಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ