ಹಾವೇರಿ: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಲು ಜಿಲ್ಲೆಯಲ್ಲಿ ಪ್ರಾರಂಭಿಸಲಾದ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕ್ ೨೫ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅ. ೨೦ರಂದು ಬೆಳಗ್ಗೆ ೧೧ಕ್ಕೆ ನಗರದ ರಜನಿ ಸಭಾಂಗಣದಲ್ಲಿ ಬ್ಯಾಂಕಿನ ರಜತ ಮಹೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ ಹೇಳಿದರು.
ಅ. ೨೦ರಂದು ಬೆಳಗ್ಗೆ ೧೧ಕ್ಕೆ ನಡೆಯುವ ಸಮಾರಂಭದಲ್ಲಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವ ಎಚ್.ಕೆ. ಪಾಟೀಲ ಉದ್ಘಾಟಕರಾಗಿ, ಸಂಸದ ಬಸವರಾಜ ಬೊಮ್ಮಾಯಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್‌ಬಿಐನ ಪ್ರಧಾನ ವ್ಯವಸ್ಥಾಪಕಿ ಮೀನಾಕ್ಷಿ ಗಡ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ತೆರಿಗೆ ಇಲಾಖೆಯ ಹೆಚ್ಚುವರಿ ಕಮಿಷನರ್ ಪ್ರಿಯದರ್ಶಿನಿ ಬಸೇಗಣ್ಣಿ, ಜಿಲ್ಲಾಸ್ಪತ್ರೆಯ ದಂತ ಆರೋಗ್ಯಾಕಾರಿ ಡಾ. ಕಲ್ಪನಾ ಎಂ.ಎಸ್., ಡಿಸಿಪಿ ಪ್ರಗ್ಯಾ ಆನಂದ, ಆಹ್ವಾನಿತರಾಗಿ ಸಹಕಾರ ಇಲಾಖೆ ಉಪನಿಬಂಧಕ ಎ.ಯು. ಖಾನ ಪಾಲ್ಗೊಳ್ಳಲಿದ್ದಾರೆ ಎಂದರು.
ಸುಧಾ ಆನೂರಶೆಟ್ರು, ಕಾವ್ಯಾ ಕೋರಿಶೆಟ್ಟರ, ಶೈಲಾ ಬಸೇಗಣ್ಣಿ, ಪಾರ್ವತಿ ಭಾವನೂರ, ಕವಿತಾ ಕಿತ್ತೂರ, ಲೀಲಾ ಗಡಾದ, ಅಂಜನಾ ಕುಂಠೆ, ರತ್ನವ್ವ ಹೇರೂರ, ರತ್ನಾ ಅಂಗಡಿ ಉಪಸ್ಥಿತರಿದ್ದರು.