ಮದ್ದೂರು: ಗೌರಿ ಗಣೇಶ ಹಬ್ಬದ ಅಂಗವಾಗಿ ತಾಲೂಕಿನ ಗೊರವನಹಳ್ಳಿಯಲ್ಲಿ ನಡೆದ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ವಿಕಾಸ್, ಟೋನಿ ಪ್ರಥಮ, ವಿಷ್ಣು - ದ್ವಿತೀಯ ಹಾಗೂ ಶಿವು ತೃತೀಯ ಸ್ಥಾನ ಗಳಿಸಿ ಬಹುಮಾನ ಪಡೆದರು.
ಸ್ಪರ್ಧೆಯಲ್ಲಿ ಮರಕಾಡುದೊಡ್ಡಿ, ವಳೆಗೆರೆಹಳ್ಳಿ, ಕೆ.ಎಂ.ದೊಡ್ಡಿ, ಆನೆ ದೊಡ್ಡಿ ಸೇರಿ ಹಲವು ಗ್ರಾಮಗಳಿಂದ 40ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ನ.ಲಿ.ಕೃಷ್ಣ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಗಳಾದ ಚಕ್ಕಡಿ ಓಟ, ಕೆಸರು ಗದ್ದೆ ಓಟ ಸೇರಿ ಹಲವು ಕ್ರೀಡೆಗಳು ಕಣ್ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ವಿನಾಯಕ ಬಳಗ ಗೌರಿ ಗಣೇಶ ಹಬ್ಬದ ಅಂಗವಾಗಿ ಕೆಸರು ಗದ್ದೆ ಓಟ ಸ್ಪರ್ಧೆ ಹಮ್ಮಿಕೊಂಡು ಗ್ರಾಮೀಣ ಕ್ರೀಡೆಗಳನ್ನು ಜೀವಂತವಾಗಿಸುವ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.ಕ್ರೀಡಾಕೂಟಕ್ಕೆ ಚಾಲನೆ ನೀಡಿದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಪಿ.ರಾಘವ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ರೈತರು ಕೃಷಿಯಿಂದ ವಿಮುಖರಾಗುತ್ತಿರುವ ನಡುವೆಯೂ ರೈತರನ್ನು ಉತ್ತೇಜಿಸುವ ಬೇಸಾಯಕ್ಕೆ ಸಂಬಂಧಿಸಿದ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ತೀರ್ಪುಗಾರರಾಗಿ ಮಹೇಶ್, ಅವಿನಾಶ್, ಸುನಿಲ್ ಭಾಗವಹಿಸಿದ್ದರು.
------------29ಕೆಎಂಎನ್ ಡಿ11
ಮದ್ದೂರು ತಾಲೂಕು ಗೊರವನಹಳ್ಳಿಯಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ನಡೆದ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳ ಸಂಭ್ರಮ.