ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಪಂ ವತಿಯಿಂದ ನಿವೇಶನ ವಿತರಿಸುವ ಫಲಾನುಭವಿಗಳ ಆಯ್ಕೆ ಮಾಡಿರುವ ಪಟ್ಟಿ ಪ್ರಕ್ರಿಯೆ ಸರಿಯಿಲ್ಲ. ಗ್ರಾಮ ಸಭೆ ಮೂಲಕ ಆಯ್ಕೆ ಪಟ್ಟಿ ಮಾಡಿಲ್ಲ. ಆಡಳಿತ ಮಂಡಳಿ ಸ್ವ ಇಚ್ಛೆಯಿಂದ ಆಯ್ಕೆ ಮಾಡಿದೆ. ಈ ಪಟ್ಟಿ ಬಗ್ಗೆ ಅನುಮಾನ ಉಂಟಾಗಿದೆ. ಫಲಾನುಭವಿಗಳ ಆಯ್ಕೆ ಪಟ್ಟಿ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಹರಳಹಳ್ಳಿ ಹಾಗೂ ಕೆನ್ನಾಳು ಗ್ರಾಮಸ್ಥರು, ನಿವೇಶನ ರಹಿತ ಬಡ ಕುಟುಂಬಸ್ಥರು, ಕೆನ್ನಾಳು ಗ್ರಾಪಂ ಎದುರು ಅಡುಗೆ ತಯಾರಿಸಿ ಸಾಮೂಹಿಕ ಭೋಜನ ಸ್ವೀಕರಿಸಿ ಪ್ರತಿಭಟಿಸಿದರು.
ಕೆನ್ನಾಳು ಗ್ರಾಪಂ ಮುಂಭಾಗದಲ್ಲೇ ಜಯಂತಿನಗರ ಬಡಾವಣೆಯ ಮಹಿಳೆಯರು ಒಳಗೊಂಡಂತೆ ಅರ್ಹ ನಿವೇಶನ ಫಲಾನುಭವಿಗಳು ನಮಗೆ ತಕ್ಷಣ ನಿವೇಶನದ ಹಕ್ಕು ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ತೀವ್ರವಾಗಿ ಒತ್ತಾಯಿಸಿದರು.ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೆನ್ನಾಳು ಗ್ರಾಪಂ ಅಧ್ಯಕ್ಷ ಹರಳಹಳ್ಳಿ ಪ್ರಕಾಶ್ , ನಿವೇಶನ ಹಂಚಿಕೆಯಲ್ಲಿ ಕೆನ್ನಾಳು ಗ್ರಾಮ ಪಂಚಾಯ್ತಿ ಆಡಳಿತ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಒಮ್ಮತದಿಂದ ಕಾನೂನು ಪ್ರಕಾರವೇ ಗ್ರಾಮ ಸಭೆ ಮೂಲಕ ತೀರ್ಮಾನಿಸಿ, ನಿವೇಶನ ರಹಿತ ಬಡ ಕುಟುಂಬಸ್ಥರಿಗೆ ಜಯಂತಿನಗರ ಹಾಗೂ ಹರಳಹಳ್ಳಿ ಗ್ರಾಮದಲ್ಲಿ ಒಟ್ಟು 101 ನಿವೇಶನ ನೀಡಲು ಫಲಾನುಭವಿಗಳ ಪಟ್ಟಿ ಸರಿಯಾಗಿ ಸಿದ್ಧತೆ ಮಾಡಲಾಗಿದೆ ಎಂದರು.
ನಿವೇಶನ ಹಂಚಿಕೆ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ಅನ್ಯಾಯವೂ ಆಗಿಲ್ಲ, ಗೊಂದಲವೂ ಇಲ್ಲ. ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಳೆದ 2016ರಲ್ಲೇ ಹೋರಾಟದ ಫಲವಾಗಿ ಜಯಂತಿನಗರದಲ್ಲಿ 25 ನಿವೇಶನ ನೀಡಲಾಗಿತ್ತು. ಪ್ರಸ್ತುತ ನಮ್ಮ ಅವಧಿಯಲ್ಲಿ ಗ್ರಾಪಂ ವ್ಯಾಪ್ತಿಗೆ ಸೇರಿದ ಹರಳಹಳ್ಳಿ ಹಾಗೂ ಜಯಂತಿನಗರ ಬಡಾವಣೆಯಲ್ಲಿ ಒಮ್ಮತದಿಂದ ನಿವೇಶನ ಫಲಾನುಭವಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ನಿವೇಶನ ಹಂಚಿಕೆ ಸ್ಥಳದಲ್ಲಿ ನಾಗರಿಕ ಸೌಲಭ್ಯ, ಕ್ರೀಡಾಂಗಣಕ್ಕೆ ಗ್ರಾಮ ಠಾಣಾ ಜಾಗ ಗುರುತಿಸಲಾಗಿದೆ. ಯಾವುದೇ ಸಮಸ್ಯೆ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.