ಕನ್ನಡಪ್ರಭ ವಾರ್ತೆ ಉಡುಪಿ
ಕರಾವಳಿಗೆ ಹಾಗೂ ಮೀನುಗಾರ ಸಮುದಾಯಕ್ಕೆ ಭರ್ಜರಿ ಯೋಜನೆಗಳನ್ನು ನೀಡಿರುವ ಸಿದ್ದರಾಮಯ್ಯ ಅವರು ಮಲ್ಪೆಯಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ವ್ಯವಸ್ಥೆ, ಮೀನುಗಾರಿಕಾ ನೀತಿ ಜಾರಿಗೆ ಪ್ರಯತ್ನ, ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿ, ಕಡಲ ತೀರದ ಅಭಿವೃದ್ಧಿ, ರಸ್ತೆ ಬದಲಿ ಸೌಲಭ್ಯಗಳ ಉನ್ನತೀಕರಣ, ಉಡುಪಿ ಜಿಲ್ಲಾ ಕ್ರೀಡಾಂಗಣಕ್ಕೆ ಅನುದಾನ, ಸಮುದ್ರ ಕೊರೆತ ತಡೆಗಟ್ಟುವಿಕೆಗೆ ರೂ 200 ಕೋಟಿ ಅನುದಾನ ಸೇರಿದಂತೆ ಹಲವಾರು ಬಂಪರ್ ಯೋಜನೆಗಳನ್ನು ಘೋಷಣೆ ಮಾಡಿರುತ್ತಾರೆ.
ರಾಜ್ಯಾದ್ಯಂತ ಅಕ್ಕ ಕೆಫೆ ಮತ್ತು ಅಕ್ಕ ಸಹಕಾರಿ ಸಂಘಗಳನ್ನು ಸ್ಥಾಪಿಸಲು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಅಕ್ಕ ಕೆಫೆ ಸ್ಥಾಪನೆಯಾಗಲಿದೆ. ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನ 1 ಸಾವಿರ ರು. ಹಾಗೂ ಸಹಾಯಕಿಯರ ಮಾಸಿಕ ಗೌರವಧನ 750 ರು.ನಷ್ಟು ಹೆಚ್ಚಿಸುವ ಭರವಸೆಯನ್ನು ಬಜೆಟ್ ನಲ್ಲಿ ನೀಡಿದ್ದಾರೆ.ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಮಾಸಿಕ ಗೌರವಧನ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಬಿಸಿಯೂಟ ಸಿಬ್ಬಂದಿಗೂ ವೇತನ ಏರಿಕೆ ಆಗಲಿದೆ. ಹೆಚ್ಚುವರಿಯಾಗಿ, 100 ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿಯೂ, 50 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿಯೂ ಉನ್ನತೀಕರಿಸಲಾಗುವುದು ಎಂದು ಘೋಷಿಸಿದ್ದಾರೆ. ಶಾಲಾ ಮಕ್ಕಳಿಗೆ . ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು 1,500 ಕೋಟಿ ರು. ಮೀಸಲಿಡಲಾಗಿದ್ದು, ಅಜೀಂ ಪ್ರೇಮ್ ಜಿ ಸಂಸ್ಥೆಯ ಸಹಯೋಗದಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ .
ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಜನಸ್ನೇಹಿಯಾಗಿದ್ದು ಸರ್ವ ವರ್ಗದ ಜನತೆಯ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಮತ್ತೊಮ್ಮೆ ಜನಪರ ಮುಖ್ಯಮಂತ್ರಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.ಅದಕ್ಕಾಗಿ ರಾಜ್ಯದ ಸಮಸ್ತ ಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಅಭಿನಂದನೆ ಸಲ್ಲಿಸುವುದಾಗಿ ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.