ರಾಮನಗರ: ನಗರದ ಖಾಸಗಿ ಶಾಲೆಗಳ ಪ್ರವೇಶ ಪ್ರಾರಂಭದ ಇಂಗ್ಲಿಷ್ ಜಾಹಿರಾತು ಫಲಕಗಳನ್ನು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಹರಿದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಆದೇಶದ ಪ್ರಕಾರ ಕನ್ನಡ ಅಕ್ಷರಗಳು ಶೇ.60ರಷ್ಟು ದೊಡ್ಡದಾಗಿ ಇರಬೇಕು. ಇಂಗ್ಲಿಷ್ ಅಕ್ಷರಗಳು ಶೇ.40ರಷ್ಟು ಸಣ್ಣದಾಗಿ ಇರಬೇಕು. ಈ ಎಲ್ಲ ನಿಯಮಗಳನ್ನು ಮೀರಿ ಇಂಗ್ಲಿಷ್ ಜಾಹಿರಾತು ಫಲಕಗಳೇ ನಗರಾದ್ಯಂತ ರಾರಾಜಿಸುತ್ತಿವೆ. ಕನ್ನಡ ನಾಮಫಲಕಗಳು ಇಲ್ಲದಂತಾಗಿದೆ. ಎಲ್ಲ ಶಾಲೆಗಳಿಗೆ ಬಿಇಒ ಕಚೇರಿ ಮೂಲಕ ನೋಟಿಸ್ ಜಾರಿ ಮಾಡಿ ಕೂಡಲೇ ಇಂಗ್ಲಿಷ್ ಜಾಹಿರಾತುಗಳನ್ನು ತೆಗೆದು ಕನ್ನಡ ಜಾಹಿರಾತು ಫಲಕ ಅಳವಡಿಸಿಕೊಳ್ಳಲು ಸೂಚಿಸಬೇಕು ಎಂದು ಕನ್ನಡಪರ ಸಂಘಟನೆಗಳು ಗಡುವು ನೀಡಿದ್ದರು.
ಅಲ್ಲದೆ, ಖಾಸಗಿ ಶಾಲಾ - ಕಾಲೇಜುಗಳ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಗೂ ಸಂಘಟನೆಗಳ ಮುಖಂಡರು ಖುದ್ಧಾಗಿ ತೆರಳಿ ಮನವಿ ಸಲ್ಲಿಸಿದ್ದರು. ಇಷ್ಟಾದರು ಖಾಸಗಿ ಶಾಲಾ - ಕಾಲೇಜುಗಳ ಆಡಳಿತ ಮಂಡಳಿ ಆಂಗ್ಲ ಭಾಷೆಯ ಜಾಹಿರಾತು ತೆರವುಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಘಟನೆಗಳ ಕಾರ್ಯಕರ್ತರು ಇಂಗ್ಲಿಸ್ ಜಾಹಿರಾತುಗಳನ್ನು ಹರಿದು ಹಾಕಿದರು.ಕರುನಾಡ ಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಎಂ.ಜಗದೀಶ್ ಐಜೂರು, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಎಂ.ಎನ್.ಆರ್ ರಾಜು, ಸಮತಾ ಸೈನಿಕ ದಳದ ಸುರೇಶ್, ಕರುನಾಡ ಸೇನೆ ಸಂಘಟನೆಯ ರಾಜ್ಯ ಉಸ್ತುವಾರಿ ಅಧ್ಯಕ್ಷ ಗಂಗಾಧರ್ ವಿ.ಎನ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಆರ್, ಜೆ ಅರ್ಜುನ್, ಕರುನಾಡ ಸೇನೆ ತಾಲೂಕು ಮಹಿಳಾ ಕಾರ್ಯದರ್ಶಿ ಪುಷ್ಪಲತಾ, ಕರವೇ ಮಾಗಡಿ ತಾಲೂಕು ಅಧ್ಯಕ್ಷ ವಿನೋದ್, ಕರವೇ ಜಿಲ್ಲಾ ಕಾರ್ಯಾಧ್ಯಕ್ಷ ಆರ್,ಬಿ,ಎಲ್ ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಕರವೇ ಮುಖಂಡ ರಾಜು ಮತ್ತಿತರರು ಭಾಗವಹಿಸಿದ್ದರು.
ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಇಂಗ್ಲಿಷ್ ಜಾಹಿರಾತು ಫಲಕಗಳನ್ನು ಹರಿಯುತ್ತಿರುವುದು.