ಕನ್ನಡಪ್ರಭ ವಾರ್ತೆ ಸಾಗರ

ಪಟ್ಟಣದ ಶಿವಮೊಗ್ಗ ರಸ್ತೆಯ ರೂಫ್‌ ಟಫ್‌ ಕೆಫೆಯಲ್ಲಿ ಗುರುವಾರ ಬಿಹಾರ ಮೂಲದ ಕಾರ್ಮಿಕನನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ, ಆರೋಪಿಯ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಶುಕ್ರವಾರ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಬಜರಂಗದಳದ ಜಿಲ್ಲಾ ಸಂಚಾಲಕ ಸಂತೋಷ್ ಶಿವಾಜಿ ಮಾತನಾಡಿ, ರೂಫ್‌ ಟಪ್ ಕೆಫೆ ಹೋಟೆಲ್‌ನಲ್ಲಿ ಬಿಹಾರ ಮೂಲದ ಯುವಕ ಟಿಂಕೂ ಶರ್ಮನನ್ನು ಅತ್ಯಂತ ಕ್ರೂರವಾಗಿ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಈ ಪ್ರಕರಣವನ್ನು ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸಬೇಕು. ಟಿಂಕೂ ಶರ್ಮ ಕೊಲೆಗೆ ಕಾರಣವಾಗಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವ ಜೊತೆಗೆ ತಪ್ಪಿತಸ್ತರಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯ ಮಾಡಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಮಾತನಾಡಿ, ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಬಡ ಕಾರ್ಮಿಕನ ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆ ಕೊಡಿಸಬೇಕು. ಬಿಹಾರ ಸೇರಿ ಉತ್ತರ ಭಾರತದಿಂದ ಅನೇಕ ಯುವಕರು ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದಿರುತ್ತಾರೆ. ಅವರಿಗೆ ಸಂಬಳ ಕೊಡುವ ವಿಷಯದಲ್ಲಿ ತಗಾದೆ ತೆಗೆದು ಕೊಲೆ ಮಾಡಿರುವ ಕೃತ್ಯ ಅಮಾನವೀಯವಾಗಿದೆ. ಗುರುವಾರ ಸ್ಥಳಕ್ಕೆ ಬಂದ ಜಿಲ್ಲಾ ರಕ್ಷಣಾಧಿಕಾರಿಗಳು ಪರಿಶೀಲನೆ ನಂತರ ನೀಡಿದ ಹೇಳಿಕೆ ಅನೇಕ ಅನುಮಾನಕ್ಕೆ ಕಾರಣವಾಗಿದ್ದು, ಸ್ನೂಕರ್ ಸ್ಟಿಕ್‌ನಿಂದ ಅಷ್ಟೊಂದು ಕ್ರೂರವಾಗಿ ಕೊಲೆ ಮಾಡಲು ಸಾಧ್ಯವಿಲ್ಲ. ಕೊಲೆ ಕುರಿತು ಮೂಲದಿಂದ ತನಿಖೆ ನಡೆಸಿ ಎಂದು ಆಗ್ರಹಿಸಿದರು.

ನ್ಯಾಯವಾದಿ ಕೆ.ವಿ. ಪ್ರವೀಣ್ ಮಾತನಾಡಿ, ಕೊಲೆ ಹಿಂದೆ ಜಿಹಾದಿ ಮನಸ್ಥಿತಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಬಿಹಾರ ಸರ್ಕಾರಕ್ಕೆ ಪ್ರಕರಣದ ಮಾಹಿತಿ ರವಾನೆಯಾಗಿದ್ದು, ಇದು ಸಿಬಿಐ ತನಿಖೆ ನಡೆದರೂ ಅಚ್ಚರಿಯಿಲ್ಲ. ಹೊಟ್ಟೆಪಾಡಿಗೆ ಬಂದ ಕಾರ್ಮಿಕರ ಮೇಲೆ ಇಂತಹ ಹಲ್ಲೆ ಮಾಡಿರುವುದು ಮಾನವ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದರು.


ಬಿಜೆಪಿ ಯುವಮೋರ್ಚಾ ಜಿಲ್ಲಾ ಮುಖಂಡ ಅರುಣ ಕುಗ್ವೆ ಮಾತನಾಡಿದರು. ಬಿ.ಟಿ.ರವೀಂದ್ರ, ಪರಶುರಾಮ್, ಸುರೇಶ್, ವಿಜಯೇಂದ್ರ, ಸುನೀಲ್ ರುದ್ರಪ್ಪ ಇನ್ನಿತರರು ಹಾಜರಿದ್ದರು.