ಕರ್ನಾಟಕ ಪರ ಗೊತ್ತುವಳಿ, ಸರ್ಕಾರ ಗಂಭೀರ

KannadaprabhaNewsNetwork |  
Published : Aug 16, 2026, 04:00 AM IST
ಸಚಿವ ಸತೀಶ ಜಾರಕಿಹೊಳಿ ಅ‍ವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು | Kannada Prabha

ಸಾರಾಂಶ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸಬೇಕೆಂದು ಕಳೆದ ಐದು ತಿಂಗಳಿಂದ ಸಮಾನ ಮನಸ್ಕ ಕನ್ನಡ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಕುರಿತು ನಗರಾಭಿವೃದ್ಧಿ ಸಚಿವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸಬೇಕೆಂದು ಕಳೆದ ಐದು ತಿಂಗಳಿಂದ ಸಮಾನ ಮನಸ್ಕ ಕನ್ನಡ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಕುರಿತು ನಗರಾಭಿವೃದ್ಧಿ ಸಚಿವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಸ್ವಾತಂತ್ರ್ಯೋತ್ಸವ ಸಮಾರಂಭ ನಡೆದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಕನ್ನಡಪರ ಸಂಘಟನೆಗಳ ಮುಖಂಡರು ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಕರ್ನಾಟಕ ಪರವಾದ ಗೊತ್ತುವಳಿ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ ಎಂದು ಸಚಿವರು ನಿಯೋಗಕ್ಕೆ ತಿಳಿಸಿದರು.ಪಾಲಿಕೆ ಸೂಪರ್‌ಸೀಡ್‌ಗೆ ಒತ್ತಾಯ:

ಕಳೆದ ಮೇ 13ರಂದು ಮಹಾನಗರ ಪಾಲಿಕೆ ಸಭೆ ನಡೆದ ಬಳಿಕ ಯಾವುದೇ ಪರಿಷತ್ ಸಭೆ ನಡೆದಿಲ್ಲ. ಇದರಿಂದ ಪಾಲಿಕೆಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಬೇಕು ಎಂದು ಕನ್ನಡ ಸಂಘಟನೆಗಳ ಮುಖಂಡರು ಸಚಿವರನ್ನು ಒತ್ತಾಯಿಸಿದರು.ಆ.18ರಂದು ಪಾಲಿಕೆ ಪರಿಷತ್ ಸಭೆ ಕರೆಯಲಾಗಿದ್ದು, ಸಭೆಯ ಕಲಾಪ ಪಟ್ಟಿಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯ ಪ್ರಸ್ತಾಪವೇ ಇಲ್ಲ. ಗೊತ್ತುವಳಿಯನ್ನು ಕಲಾಪ ಪಟ್ಟಿಗೆ ಸೇರಿಸದೆ ಸಭೆ ನಡೆಸಿದರೆ ಪರಿಷತ್ ಸಭಾಂಗಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಸಿದರು.ಬೆಳಗಾವಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಪ್ರಥಮ ಪ್ರಜೆಯಾದ ಮಹಾಪೌರರು ಅವರನ್ನು ಸ್ವಾಗತಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸತ್ ಸಂಪ್ರದಾಯ. ಈ ಹಿಂದೆ ಎಂಇಎಸ್‌ನ ಮಹಾಪೌರರು ಕೂಡ ರಾಜ್ಯದ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದ ಉದಾಹರಣೆಗಳಿವೆ. ಆದರೆ, ಪ್ರಸ್ತುತ ಪಾಲಿಕೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಮಹಾಪೌರರು ಮತ್ತು ಉಪಮಹಾಪೌರರು ಈ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದರೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಕನ್ನಡ ಸಂಘಟನೆಗಳ ಮುಖಂಡರು ಸಿದ್ಧರಿದ್ದಾರೆ ಎಂದು ಸಚಿವರಿಗೆ ತಿಳಿಸಿದರು. ಜುಲೈ 28ರಂದು ಬೆಳಗಾವಿಗೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಕರ್ನಾಟಕ ಪರವಾದ ಗೊತ್ತುವಳಿ ಕುರಿತು ಮಹಾನಗರ ಪಾಲಿಕೆಗೆ ಸರ್ಕಾರದಿಂದ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಸೂಚನೆ ಪಾಲಿಕೆಗೆ ಬಂದಿಲ್ಲ ಎಂದು ನಿಯೋಗವು ಸಚಿವ ಸತೀಶ ಜಾರಕಿಹೊಳಿ ಅವರ ಗಮನಕ್ಕೆ ತಂದಿತು.ಸಚಿವರ ಭರವಸೆಯನ್ನು ಕನ್ನಡ ಸಂಘಟನೆಗಳು ಸ್ವಾಗತಿಸಿವೆ. ಇದೇ ವೇಳೆ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರವಾಗುವವರೆಗೆ ಪಾಲಿಕೆ ವಿರುದ್ಧದ ಹೋರಾಟ ಮುಂದುವರಿಸಲು ನಿರ್ಧರಿಸಿವೆ. ಅಗತ್ಯಬಿದ್ದರೆ ಆಗಸ್ಟ್ 20ರ ನಂತರ ಬೆಂಗಳೂರಿಗೆ ನಿಯೋಗ ಕೊಂಡೊಯ್ದು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಲು ತೀರ್ಮಾನಿಸಲಾಗಿದೆ.ನಿಯೋಗದಲ್ಲಿ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ರಾಜು ಕೋಲಾ, ನ್ಯಾಯವಾದಿ ಆರ್.ಪಿ. ಪಾಟೀಲ, ಸಂತೋಷ ಮಾಸೇನಟ್ಟಿ, ಆನಂದ ಬಿಲಾವರ, ಸಯ್ಯದ್ ಮನ್ಸೂರ್, ಮಹೇಶ ಸಿಗಿಹಳ್ಳಿ, ಸಂತೋಷ ತಳ್ಳಿಮನಿ, ಸಾಗರ್ ಪೂಜಾರಿ, ಎಸ್.ಎಸ್. ಮೂಕನವರ, ಲಕ್ಷ್ಮಣ ಲಮಾಣಿ, ಮೈನು ಮಕಾನದರ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ಸ್ಥಾನ ತಪ್ಪಲು ಎಂ.ಬಿ.ಪಾಟೀಲ ಕಾರಣ
ಹುನ್ನಾರಗಳಿಗೆ ಜನರೇ ಕಡಿವಾಣ ಹಾಕಲಿ