ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದು, ಯಾರೇ ತಪ್ಪು ಮಾಡಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಸರ್ಕಾರ ಸ್ವಯಂ ಪ್ರಕರಣ ಎಂದು ತೆಗೆದುಕೊಂಡಿದೆ. ತಪ್ಪಿತಸ್ಥರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಾವು ಬಿಜೆಪಿಯವರಿಗೆ ಒಂದು ಮಾತು ಕೇಳುತ್ತೇವೆ. ಹಿಂದೆ ಪುಲ್ವಾಮಾ ಪ್ರಕರಣ ನಡೆದು ಐದು ವರ್ಷಗಳು ಕಳೆದವು. ಆದರೆ, ಈ ವರೆಗೆ ತಪ್ಪಿತಸ್ಥರನ್ನು ಪತ್ತೆಹಚ್ಚುವ ಕಾರ್ಯ ಮಾಡಿಲ್ಲ. ಅದರ ಬಗ್ಗೆ ಈಗ ಚರ್ಚೆ ಮಾಡುವುದು ಬೇಡವೆ ಎಂದು ಪ್ರಶ್ನಿಸಿದರು.ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವ ಕುರಿತು ತನಿಖೆ ನಡೆಯುತ್ತಿರುವಾಗಲೇ ರಾಜ್ಯ ಸರ್ಕಾರ ವಜಾ ಮಾಡಿ ಎಂದು ಆಗ್ರಹಿಸಿದರೆ ಹೇಗೆ? ಪುಲ್ವಾಮಾ ದಾಳಿಯ ವೇಳೆ ಭದ್ರತೆಯ ನಡುವೆಯೂ ಆರ್‌ಡಿಎಕ್ಸ್ ಒಳಗಡೆ ಬಂದಾಗ ಅಂದು ಯಾರ ಸರ್ಕಾರವಿತ್ತು. ಅದಕ್ಕೆ ಕಾರಣ ಯಾರು?. ಆವಾಗ ಏಕೆ ಸರ್ಕಾರದ ರಾಜೀನಾಮೆ ಕೇಳಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಪ್ರಧಾನಿಗಳ ಇಲ್ಲವೇ ರಕ್ಷಣಾ ಸಚಿವರ ರಾಜೀನಾಮೆ ಕೇಳಬೇಕಿತ್ತು. ಆದರೆ, ಅದ್ಯಾವುದು ಆಗಲಿಲ್ಲ ಎಂದರು.
ಈಚೆಗೆ ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಈ ಘೋಷಣೆ ಸಾಮಾಜಿಕ ಜಾಲತಾಣದಲ್ಲಿ ಇಂದಿಗೂ ಹರಿದಾಡುತ್ತಿದೆ. ಇದರ ಬಗ್ಗೆ ಬಿಜೆಪಿ ಅವರದು ಹೋರಾಟ ಇಲ್ಲವೇ?. ಅವರು ಅಂದು ಬೀದಿಗಳಿದು ಹೋರಾಟ ಮಾಡಬಹುದಿತ್ತು. ಅದರ ಬಗ್ಗೆ ಸಹ ಅಧಿವೇಶನದಲ್ಲಿ ಕೂಗಬಹುದಿತ್ತು. ಏಕೆ ಕೂಗಲಿಲ್ಲ. ಕೇಸರಿ ಹಾಕಿಕೊಂಡು ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದರೆ ನಡೆಯುತ್ತಾ ಎಂದು ಪ್ರಶ್ನಿಸಿದರು.ಈ ದೇಶದಲ್ಲಿ 10 ವರ್ಷಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಎಷ್ಟು ಪ್ರಕರಣಗಳಿವೆ. ಎಷ್ಟು ಜನರನ್ನು ಬಂಧನ ಮಾಡಿದ್ದಾರೆ ತಿಳಿಸಲಿ. ಸರ್ಕಾರ ಯಾರನ್ನು ರಕ್ಷಣೆ ಮಾಡಲ್ಲ. ಯಾರ ಪರವಾಗಿಯೂ ಇಲ್ಲ. ಯಾರು ಮಾಡಿದ್ದಾರೆಯೋ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತದೆ ಎಂದರು.
ಜಾತಿಗಣತಿ ವರದಿ ಜಾರಿಗೆ ಬಿಜೆಪಿ ವಿರೋಧ ವಿಚಾರಕ್ಕೆ ಉತ್ತರಿಸಿದ ಸಚಿವ ಲಾಡ್, ಜಾತಿಗಣತಿ ಯಾರು ನೋಡಿದ್ದಾರೆ. ಅದನ್ನು ನೋಡುವ ಮುಂಚೆ ಕೇಳುವುದು ಸರಿಯಲ್ಲ ಎಂದರು.