ಕನ್ನಡಪ್ರಭ ವಾರ್ತೆ ಉಡುಪಿ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳು ನೀಡುವ ಕಾಟದ ಬಗ್ಗೆ ಅಬಕಾರಿ ವ್ಯಾಪಾರಿಗಳು ಮುಖ್ಯಮಂತ್ರಿಗೆ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಅಬಕಾರಿ ಸಚಿವರ ಮೇಲೂ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ. ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನಾಲ್ಕು ತಿಂಗಳಾಗಿದೆ. ಆದರೆ ಆಡಳಿತಾತ್ಮಕ ಸಮಸ್ಯೆ ಊಹೆಗೆ ನಿಲುಕದಷ್ಟು ಹೆಚ್ಚಿವೆ. ಇಲಾಖೆಯ ಧೋರಣೆಯಿಂದ ಕರ್ನಾಟಕದಲ್ಲಿ 12,500 ಮದ್ಯದಂಗಡಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. ಮದ್ಯದ ಅಂಗಡಿಯ ವರ್ಗಾವಣೆಗೆ 18 ಲಕ್ಷ ರು. ಸರ್ಕಾರಕ್ಕೆ ಪಾವತಿಸುವ ನಿಯಮವಿದೆ. ಆದರೆ ಈಗ ಹೆಚ್ಚುವರಿ 25 ಲಕ್ಷ ರು.ಗಳಿಗೆ ಅಧಿಕಾರಿಗಳು ಬೇಡಿಕೆ ಇಡುತ್ತಿದ್ದಾರೆ. ಹೊಸ ಸನ್ನದಿಗೆ 10 ಲಕ್ಷ ರು.ಗೆ ಬದಲು 75 ಲಕ್ಷ ರು. ವಸೂಲಿ ಮಾಡುತ್ತಿದ್ದಾರೆ. ಇಲಾಖೆ ಭ್ರಷ್ಟಾಚಾರದ ಕೂಪವಾಗಿಬಿಟ್ಟಿದೆ ಎಂದವರು ಆರೋಪಿಸಿದರು. * ಅಧಿಕಾರಿಗಳೇ ಆರ್‌ಟಿಐ ಏಜೆಂಟರು? ಕೆಲವು ಅಧಿಕಾರಿಗಳು ಮಾಹಿತಿ ಹಕ್ಕಿನ ಏಜೆಂಟರಂತಾಗಿಬಿಟ್ಟಿದ್ದಾರೆ. ಅವರು ತಮ್ಮದೇ ಇಲಾಖೆಯ ಇತರ ಅಧಿಕಾರಿಗಳಿಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿ, ಅದನ್ನು ಹಿಡಿದುಕೊಂಡು ಮದ್ಯದ ವ್ಯಾಪಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪವೂ ಇದೆ. ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು. ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ 42,000 ಕೋಟಿ ರು. ಆದಾಯ ಇದೆ. ಇನ್ನೂ ಹೆಚ್ಚು ಆದಾಯಕ್ಕಾಗಿ ಈ ಅಧಿಕಾರಿಗಳು ವ್ಯಾಪಾರಿಗಳಿಗೆ ಕಾಟ ಕೊಡುತಿದ್ದಾರೆ, ಸ್ವತಃ ಮುಖ್ಯಮಂತ್ರಿಗಳ ಕೃಪಾಕಟಾಕ್ಷದಲ್ಲಿಯೇ ಇದೆಲ್ಲವೂ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದ ಕೋಟ, ಮದ್ಯದ ವ್ಯಾಪಾರಿಗಳ ಪತ್ರಕ್ಕೆ ಮುಖ್ಯಮಂತ್ರಿಯಾಗಿ ತಾವು ತೆಗೆದುಕೊಂಡ ಕ್ರಮವನ್ನು ಜನತೆ ಮುಂದೆ ಇಡಬೇಕು ಎಂದೂ ಆಗ್ರಹಿಸಿದರು.