ಇದಲ್ಲದೇ ಯುಗಾದಿ ಹಬ್ಬದ ಚೀಟಿ, ಹಲವೆಡೆಗಳಲ್ಲಿ ಗುಡ್ಡೆ ಮಾಂಸದ ವಹಿವಾಟು ಸಹಾ ನಡೆಯಿತು. ಅಂದಾಜು 20ರಿಂದ 25 ಲಕ್ಷ ರುಪಾಯಿ ವ್ಯಾಪಾರವಾಗಿದೆ ಎಂದು ಅಂದಾಜಿಸಲಾಗಿದೆ. ಶುಕ್ರವಾರ ವರ್ಷದ ತೊಡಕು, ಶನಿವಾರ ರಂಜಾನ್ ಇರುವುದರಿಂದ ಮಾಂಸಕ್ಕೆ ಹೆಚ್ಚು ಬೇಡಿಕೆ ಉಂಟಾಗಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ ಎಂದು ವ್ಯಾಪಾರಿ ರಫೀಕ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಯುಗಾದಿ ಹಬ್ಬದ ಮರುದಿನ ಶುಕ್ರವಾರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವರ್ಷದ ತೊಡಕು ಆಚರಣೆಗಾಗಿ ಜನತೆ ಮಾಂಸದ ಅಂಗಡಿಗಳಿಗೆ ಮುಗಿಬಿದ್ದಿದ್ದು ಕಂಡು ಬಂತು. ನಗರದ ಪ್ರಮುಖ ರಸ್ತೆಗಳಾದ ಬಿ.ಬಿ. ರಸ್ತೆ, ಎಂ.ಜಿ.ರಸ್ತೆ, ಗಂಗಮ್ಮ ಗುಡಿ, ಬಜಾರ್ ರಸ್ತೆ, ಸರ್ ಎಂ.ವಿ. ವೃತ್ತ, ಅಂಬೇಡ್ಕರ್ ವೃತ್ತಗಳು ಪ್ರತಿ ದಿನ ಜನಸಂದಣಿಯಿಂದ ಇರುತ್ತಿದ್ದು, ಶುಕ್ರವಾರ ಹಬ್ಬದ ಅಂಗವಾಗಿ ಜನಸಂಖ್ಯೆ ತುಂಬಾ ವಿರಳವಾಗಿತ್ತು. ನಗರದಲ್ಲಿ ಬಹುತೇಕ ಅಂಗಡಿ-ಮಂಗಟ್ಟುಗಳು, ಹೋಟೆಲ್‌ಗಳು ಮುಚ್ಚಿದ್ದವು. ವರ್ಷ ತೊಡಕಿನ ಹಿನ್ನೆಲೆಯಲ್ಲಿ ಮಾಂಸದ ಅಂಗಡಿಗಳಿಗೆ ಎಲ್ಲಿಲ್ಲದ ಬೇಡಿಕೆ ನಿರ್ಮಾಣವಾಗಿತ್ತು. ಜನತೆ ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು. ಮುಂಜಾನೆ 3ಗಂಟೆಯಿಂದಲೇ ಅಂಗಡಿ ತೆರೆದಿದ್ದ ಮಾಂಸದ ಅಂಗಡಿ ಮಾಲೀಕರು ಭರ್ಜರಿ ವ್ಯಾಪಾರ ನಡೆಸಿದರು. ನಗರದ ಸಂತೆ ಮಾರುಕಟ್ಟೆಯ ಮಾಂಸದ ಅಂಗಡಿಗಳ ಸಂಕೀರ್ಣ, ಕೋಳಿ ಮತ್ತು ಮೀನಿನ ಅಂಗಡಿಗಳು, ಎಂಜಿ ರಸ್ತೆ, ವಾಪಸಂದ್ರ, ನಗರ ಹೊರವಲಯ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿನ ಪೆರೇಸಂದ್ರ, ಮಂಡಿಕಲ್, ನಂದಿ, ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತಿ ಕೇಂದ್ರಸ್ಥಾನಗಳಲ್ಲಿ ಕೋಳಿ, ಮೀನು, ಕುರಿ ,ಮೇಕೆ ಮತ್ತು ಹಂದಿ ಮಾಂಸದ ಅಂಗಡಿಗಳ ಬಳಿ ಜನಜಂಗುಳಿ ಕಂಡು ಬಂತು.
ದಿಢೀರ್ ಬೆಲೆ ಏರಿಕೆ:
ಒಂದು ಕೆಜಿ ಕುರಿ ಮಾಂಸ 650 ರಿಂದ 700 ರು. ಇದ್ದದ್ದು, ದಿಢೀರ್ 850 ರು.ಗೆ ಏರಿಕೆಯಾಗಿತ್ತು. 150ರಿಂದ 200 ರು.ಗೆ ಸಿಗುತ್ತಿದ್ದ ಬೋಟಿ 300 ರು, 350 ರಿಂದ 500 ರು. ಇದ್ದ ಕುರಿ ಮತ್ತು ಮೇಕೆ ತಲೆ, ಕಾಲುಗಳು 700 ರಿಂದ 850 ರು.ಗೆ ಏರಿಕೆಯಾಗಿತ್ತು. 1 ಕೆಜಿ ಕೋಳಿ ಮಾಂಸ 170 ರಿಂದ 270 ರು.ಗೆ ಏರಿಕೆಯಾಗಿತ್ತು. ಹಂದಿ ಮಾಂಸ ಕೆಜಿ 260ರಿಂದ 380 ರು.ಗೆ ದೊರೆಯುತ್ತಿದ್ದು, ಇದೀಗ 400 ರಿಂದ 500 ರು.ಗೆ ಹೆಚ್ಚಿತ್ತು. ಮೀನು – ಕ್ಯಾಟಲಾಕ್- 270 ರುಪಾಯಿ, ಜಿಲೇಬಿ - 150 ರುಪಾಯಿ, ಅಂಜಲ್- 980 ರುಪಾಯಿ ಹಾಗೂ ಬಾಂಗಡ- 240 ರುಪಾಯಿಗೆ ಮಾರಾಟವಾಯಿತು.
ಇದಲ್ಲದೇ ಯುಗಾದಿ ಹಬ್ಬದ ಚೀಟಿ, ಹಲವೆಡೆಗಳಲ್ಲಿ ಗುಡ್ಡೆ ಮಾಂಸದ ವಹಿವಾಟು ಸಹಾ ನಡೆಯಿತು. ಅಂದಾಜು 20ರಿಂದ 25 ಲಕ್ಷ ರುಪಾಯಿ ವ್ಯಾಪಾರವಾಗಿದೆ ಎಂದು ಅಂದಾಜಿಸಲಾಗಿದೆ. ಶುಕ್ರವಾರ ವರ್ಷದ ತೊಡಕು, ಶನಿವಾರ ರಂಜಾನ್ ಇರುವುದರಿಂದ ಮಾಂಸಕ್ಕೆ ಹೆಚ್ಚು ಬೇಡಿಕೆ ಉಂಟಾಗಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ ಎಂದು ವ್ಯಾಪಾರಿ ರಫೀಕ್ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.