ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಕಚೇರಿ ಅಧಿಕಾರಿಗಳು ನಡೆಸಿರುವ ಸ್ಥಳ ಪರಿಶೀಲನೆ ನಡೆದಿ ವರದಿ ಸಿದ್ಧಪಡಿಸಿ ಸಲ್ಲಿಸಿದ್ದಾರೆ. ಅದರಂತೆ ಯೋಜನೆಗಾಗಿ 15 ಸಾವಿರಕ್ಕೂ ಹೆಚ್ಚಿನ ಮರಗಳನ್ನು ಕಡಿಯಬೇಕು ಹಾಗೂ ನೆಲದಡಿಯಲ್ಲಿನ ಬಂಡೆಗಳನ್ನು ಸ್ಫೋಟಿಸಬೇಕಿದೆ. ಈ ಎರಡೂ ಪ್ರಕ್ರಿಯೆಯಿಂದ ಪಶ್ಚಿಮಘಟ್ಟ ಪ್ರದೇಶ ಹಾಗೂ ವನ್ಯಜೀವಿಗೆ ಸಾಕಷ್ಟು ಹಾನಿಯಾಗಲಿದೆ. ಜತೆಗೆ, 60 ಡಿಗ್ರಿಗಳವರೆಗೆ ಕಡಿದಾದ ಪ್ರದೇಶದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಬೇಕಿದೆ ಹಾಗೂ ಹೊಸ ರಸ್ತೆಗಳ ರಚನೆ, ಹಾಲಿ ಇರುವ ರಸ್ತೆಗಳ ಅಗಲೀಕರಣವನ್ನು ಮಾಡಬೇಕಿದೆ. ಅದರೊಂದಿಗೆ ಹೆಚ್ಚಿನ ಮಳೆ, ಕಡಿದಾದ ಇಳಿಜಾರಿನಿಂದಾಗಿ ಈ ಪ್ರದೇಶದಲ್ಲಿ ಭೂಕುಸಿತವೂ ಉಂಟಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಯೋಜನೆಯಂತೆ 500 ಮೀ. ಆಳದ 3.2 ಕಿ.ಮೀ.ನಲ್ಲಿ ಭೂಗತ ಸುರಂಗಗಳನ್ನು ನಿರ್ಮಿಸಬೇಕಿದೆ. ಅದಕ್ಕಾಗಿ ಬಂಡೆಗಳನ್ನು ಕೊರೆಯುವುದು ಮತ್ತು ಸ್ಫೋಟಿಸಬೇಕಿದೆ. ಇದರಿಂದ ಪರಿಸರ ಮಾತ್ರವಲ್ಲದೆ ಮಾನವ ವಾಸಸ್ಥಳಗಳಿಗೂ ಹಾನಿಯಾಗುವ ಸಾಧ್ಯತೆಗಳಿವೆ. ಅದರಲ್ಲೂ ಈ ಭಾಗದಲ್ಲಿ ಹೆಚ್ಚಾಗಿ ವಾಸಿಸುವ ಲಯನ್ ಟೈಲ್ಡ್ ಕೋತಿಗಳಿಗೆ ಹೆಚ್ಚಿನ ಹಾನಿಯಾಗಲಿದ್ದು, ಅವುಗಳ ವಾಸಸ್ಥಳಕ್ಕೂ ಧಕ್ಕೆಯುಂಟಾಗಬಹುದು ಎಂದು ತಿಳಿಸಲಾಗಿದೆ.ಅಲ್ಲದೆ, ಯೋಜನೆಗಾಗಿ ಶಿವಮೊಗ್ಗ ವನ್ಯಜೀವಿ ವಿಭಾಗದ 14.58 ಹೆಕ್ಟೇರ್, ಸಾಗರ ವಿಭಾಗದ 11.64 ಹೆಕ್ಟೇರ್ ಹಾಗೂ ಹೊನ್ನಾವರ ವಿಭಾಗದ 27.92 ಹೆಕ್ಟೇರ್ ಸೇರಿ ಒಟ್ಟಾರೆ 54.15 ಹೆಕ್ಟೇರ್ ಅರಣ್ಯ ಭೂಮಿಯ ಅವಶ್ಯಕತೆಯಿದೆ. ಅದಕ್ಕೆ ಬದಲಾಗಿ ಚಿಕ್ಕಮಗಳೂರು ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಎರಡು ಕಡೆ ಭೂಮಿ ನೀಡುವುದಾಗಿ ತಿಳಿಸಲಾಗಿದೆ. ಅದರಲ್ಲಿ ಒಂದು ಕಡೆ 30 ಹೆಕ್ಟೇರ್, ಮತ್ತೊಂದೆಡೆ 24.15 ಹೆಕ್ಟೇರ್ ಭೂಮಿ ಕೊಡುವುದಾಗಿ ಹೇಳಲಾಗಿದೆ. ಆದರೆ, ಈ ಭೂಮಿಗಳು ಸೂಕ್ತ ಸ್ಥಳದಲ್ಲಿಲ್ಲದ ಕಾರಣ ಬದಲಿ ಭೂಮಿಯೂ ಸಮರ್ಪಕವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ಯೋಜನೆಯ ವಿನ್ಯಾಸ ಬದಲಿಸುವ ಅವಶ್ಯಕತೆಯಿದೆ ಅಥವಾ ಯೋಜನೆ ಅನುಷ್ಠಾನದ ಬಗ್ಗೆಯೇ ಮರು ಪರಿಶೀಲಿಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.