ಶಿರಸಿ: ಸಾಧಿಸಲು ಸಾಧ್ಯವಾಗದ ನಿರೀಕ್ಷೆ, ಅಪೇಕ್ಷೆಗಳನ್ನು ಹೊಂದಿರುವುದರಿಂದ ಹಲವಾರು ಯುವಕರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಎಷ್ಟೇ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಪ್ರಯತ್ನಿಸಿದರೂ ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳಿಂದ ಉದ್ದೇಶಿತ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸ್ಕೊಡ್‌ವೆಸ್‌ನಂತಹ ಸಂಸ್ಥೆಗಳು ಕೈ ಜೋಡಿಸುವ ಅವಶ್ಯಕತೆಯಿದೆ. ಹಲವಾರು ವರ್ಷಗಳಿಂದ ಸ್ಕೊಡ್‌ವೆಸ್ ಸಂಸ್ಥೆ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯವಾದ ಸೇವೆ ಸಲ್ಲಿಸುವ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಸ್ಕೊಡ್‌ವೆಸ್ ಸಂಸ್ಥೆಯ ಅಧ್ಯಕ್ಷರೂ ಆದ ಪ್ರೊ. ಹಿ.ಚಿ. ಬೋರಲಿಂಗಯ್ಯರವರು ಸಮಸ್ಯೆಗಳ ಆಳವನ್ನು ಅರ್ಥೈಸಿಕೊಂಡು ಪರಿಹಾರ ಕ್ರಮಗಳನ್ನು ಒದಗಿಸುವ ಕಾರ್ಯ ಸ್ವಯಂ ಸೇವಾ ಸಂಸ್ಥೆಗಳ ಜವಾಬ್ದಾರಿಯಾಗಬೇಕು ಎಂದರು.ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪರಿಕರಗಳನ್ನು ವಿತರಿಸಿ ಮಾತನಾಡಿದ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡರವರು ಶಕ್ತಿ ದಿವಸ್ ನಂತಹ ಕಾರ್ಯಕ್ರಮಗಳು ಸಮಾಜದ ಕಣ್ತೆರೆಸುವಲ್ಲಿ ಸಫಲವಾಗುತ್ತವೆ ಎಂದವು.
ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಗೌರವಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಕುಮಾರ ವಿ. ಕೂರ್ಸೆ, ಆಡಳಿತಾಧಿಕಾರಿ ಸರಸ್ವತಿ ಎನ್. ರವಿ, ಸಹ-ಕಾರ್ಯದರ್ಶಿ ವಸಂತ ಹಾದಿಮನೆ, ಖಜಾಂಚಿ ಎಚ್.ಜಿ. ಲತಾ, ಕಾರ್ಯಕಾರಿ ಸದಸ್ಯ ಪ್ರೊ. ಕೆ.ಎನ್. ಹೊಸಮನಿ, ದಯಾನಂದ ಅಗಾಸೆ, ಸಲಹಾ ಮಂಡಳಿ ಸದಸ್ಯರಾದ ಶ್ರೀನಿವಾಸ ಮೂರ್ತಿ, ಸದಸ್ಯರಾದ ಪ್ರತಿಭಾ ಭಟ್ ಉಪಸ್ಥಿತರಿದ್ದರು.