ಕನ್ನಡ ಪ್ರಭ ವಾರ್ತೆ ಮದ್ದೂರು
ಕೆಮ್ಮಣ್ಣುನಾಲೆ ಆಧುನೀಕರಣಕ್ಕೆ ಸರ್ಕಾರ 90 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.ಕಾವೇರಿ ನೀರಾವರಿ ನಿಗಮ 5 ಕೋಟಿ ವೆಚ್ಚದಲ್ಲಿ ಮದ್ದೂರು ಕೆರೆ ವ್ಯಾಪ್ತಿಯಲ್ಲಿ ಬರುವ ದೇಶಹಳ್ಳಿ ಮತ್ತು ಕೆಮ್ಮಣ್ಣುನಾಲೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಮ್ಮಣ್ಣು ನಾಲೆ ಅಭಿವೃದ್ಧಿ ಕಾಮಗಾರಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ನಾನು ಕ್ಷೇತ್ರ ಶಾಸಕನಾಗಿ ಆಯ್ಕೆಯಾದ ನಂತರ ನಾಲೆ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ ಎಂದರು.ಆನಂತರ ಕಾವೇರಿ ನೀರಾವರಿ ನಿಗಮ ಅಭಿವೃದ್ಧಿ ಕಾಮಗಾರಿಗಾಗಿ ಅಂದಾಜು 90 ಕೋಟಿ ರು. ವೆಚ್ಚದ ಯೋಜನೆ ರೂಪಿಸಿತ್ತು. ಈ ಬಗ್ಗೆ ತಾವು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮೇಲೆ ಒತ್ತಡ ಹಾಕುವ ಮೂಲಕ ಕೆಮ್ಮಣ್ಣು ನಾಲೆ ಆಧುನಿಕರಣಕ್ಕೆ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.
ಮದ್ದೂರು ಕೆರೆಯಿಂದ ತೊರೆಚಾಕನಹಳ್ಳಿವರೆಗೆ 22 ಕಿ.ಮೀ ವ್ಯಾಪ್ತಿಯಲ್ಲಿ ನಾಲೆ ಆಧುನಿಕರಣ ನಡೆಯಲಿದೆ. ನಾಲೆ ಎರಡು ಬದಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಬಾಕ್ಸ್ ಡ್ರೈ ನ್ ಹಾಗೂ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.ಮುಂದಿನ ಆರು ತಿಂಗಳಲ್ಲಿ ಆಧುನಿಕರಣ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಾಗಲೇ ಕಾಮಗಾರಿ ಕೈಗೊಳ್ಳಲು ಅಗತ್ಯವಾದ ಯಂತ್ರ ಮತ್ತು ಸಿಬ್ಬಂದಿ ಆಗಮಿಸಿದ್ದಾರೆ. ಬರುವ ಶುಕ್ರವಾರದಿಂದ ಕಾಮಗಾರಿ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್, ರಾ.ಚ.ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೀರೇಗೌಡ, ಮುಖಂಡರಾದ ವಳೆಗೆರೆಹಳ್ಳಿ ಪುಟ್ಟರಾಜು, ಎಂ.ಡಿ.ಮಹಾಲಿಂಗಯ್ಯ, ಶಿವಣ್ಣ, ತಮ್ಮಣ್ಣ ಹಾಗೂ ದೇಶಹಳ್ಳಿ ಮುಖಂಡರು ಇದ್ದರು.