ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜನಸ್ಪಂದನದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸ್ಥಳದಲ್ಲೇ ಪರಿಹರಿಸಲು ಕ್ರಮ ವಹಿಸಲಾಗುತ್ತಿದೆ. ಪರಿಹರಿಸಲಾಗದ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ತಾಲೂಕಿನ ಬೂಕನಕೆರೆ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ರೈತರು, ಸಾರ್ವಜನಿಕರಿಂದ ಅಹವಾಲು ಆಲಿಸಿ ಮಾತನಾಡಿ, ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಶೇ.100 ರಷ್ಟು ಅರ್ಜಿಗಳಿಗೂ ಪರಿಹಾರ ನೀಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಕಾನೂನು ಪರಿಮಿತಿಯಲ್ಲಿರುವ ಕುಂದುಕೊರತೆಗಳಿಗೆ 10 ದಿನದ ಒಳಗಾಗಿ ಪರಿಹಾರ ಒದಗಿಸಲಾಗುವುದು ಎಂದರು.
ಅರ್ಜಿಗಳ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಬಗೆಹರಿಸುವಂತಿದ್ದಲ್ಲಿ ಕೂಡಲೇ ಅವುಗಳನ್ನು ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲವೊಮ್ಮೆ ದೊಡ್ಡ ಸಮಸ್ಯೆಗಳಿದ್ದಲ್ಲಿ ಅಥವಾ ಸರಕಾರದ ಅನುದಾನದ ಅವಶ್ಯಕತೆ ಇದ್ದಲ್ಲಿ ಅಂತಹವುಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಕಳುಹಿಸಿ ಕೊಡಲಾಗುವುದು ಎಂದರು.ತಾವು ಸಲ್ಲಿಸಿದ ಅರ್ಜಿಗಳ ಕುರಿತಂತೆ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ಜನರು ಆನ್‌ಲೈನ್ ಮೂಲಕ ಪರಿಶೀಲಿಸಲು ಅನುಕೂಲವಾಗುವಂತೆ ಐಪಿಜಿಆರ್ ಎಸ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಇದರಿಂದ ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವುದರ ಜೊತೆಗೆ ಆನ್‌ಲೈನ್ ಮೂಲಕ ಪರಿಶೀಲಿಸಲು ಅನುಕೂಲ ಮಾಡಿ ಕೊಡಲಾಗುತ್ತಿದೆ ಎಂದರು.
ಬೆಳೆ ವಿಮೆ ರೈತರಿಗೆ ಹೆಚ್ಚು ಉಪಯುಕ್ತವಾಗಿದೆ. ನೊಂದಣಿ ಮಾಡಿಕೊಳ್ಳಲು ಜುಲೈ 17 ಕೊನೆ ದಿನ. ರೈತರು ತಪ್ಪದೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ನೊಂದಣಿ ಮಾಡಿಕೊಳ್ಳಿ ಎಂದರು.ಆರ್.ಟಿ.ಸಿ ಗಳಿಗೆ ಆಧಾರ್ ಸೀಡಿಂಗ್ ಮಾಡುವುದರಿಂದ ಸರ್ಕಾರದ ಯೋಜನೆಗಳನ್ನು ತಲುಪಿಸಲು ಉಪಯುಕ್ತ. ರೈತರು ತಮ್ಮ ವ್ಯಾಪ್ತಿಯ ಆರ್. ಐ ಗಳನ್ನು ಸಂಪರ್ಕಿಸಿ ಆರ್.ಟಿ.ಸಿ ಗೆ ಆಧಾರ್ ಜೋಡಣೆ ಮಾಡಿಕೊಳ್ಳಿ ಎಂದರು.
ತಾಲೂಕಿನಲ್ಲಿ 3,60,000 ಆರ್.ಟಿ.ಸಿ ಗಳಿದ್ದು, 1,50,000 ಆಧಾರ್ ಸೀಡಿಂಗ್ ಆಗಿದೆ. 15,000 ಮೃತ ಪಟ್ಟ ರೈತರ ವರಸುದಾರರಿಗೆ ಪೌತಿ ಖಾತೆ ಆಗಬೇಕಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಪಂವಾರು ಪೌತಿ ಖಾತೆ ಆಂದೋಲನ ನಡೆಸುವಂತೆ ತಹಸೀಲ್ದಾರ್ ಗೆ ನಿರ್ದೇಶನ ನೀಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ತಾಪಂ 30, ಚೆಸ್ಕಾಂ, ಮಹಿಳಾ ಮತ್ತು ಮಕ್ಕಳ, ಅಭಿವೃದ್ಧಿ , ಶಿಕ್ಷಣ , ಅರಣ್ಯ ಇಲಾಖೆ, ಹೆಚ್.ಎಲ್.ಬಿ.ಸಿ-, ಭೂ ದಾಖಲೆಗಳ ಇಲಾಖೆ-, ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳಿಂದ 156 ಅರ್ಜಿ ಸ್ವೀಕರಿಸಿ, ಸ್ಥಳದಲ್ಲೇ ಕೆಲ ಸಾರ್ವಜನಿಕರ ಸಮಸ್ಯೆಗಳನ್ನ ಬಗೆಹರಿಸಲಾಯಿತು. ಪೌತಿ ಖಾತೆ, ಇ -ಸ್ವತ್ತು ಸೇರಿದಂತೆ ವಿವಿಧ ಹಕ್ಕು ಪತ್ರಗಳನ್ನ ಅರ್ಹ ಸಾರ್ವಜನಿಕರಿಗೆ ವಿತರಿಸಲಾಯಿತು.