ಇನ್ಮುಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸ್ವರೂಪ ಬದಲು

KannadaprabhaNewsNetwork |  
Published : Jul 26, 2026, 01:30 AM IST
೨೫ಕೆಎಂಎನ್‌ಡಿ-೧ಮಂಡ್ಯದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸೈಮನ್ ಅಲೆಕ್ಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಐಸಿಸಿ ಕಾರ್ಯದರ್ಶಿ ನರೇಂದ್ರ ವೀಕ್ಷಕರಾದ ಮಂಜುಳಾ ನಾಯ್ಡು, ಎಂ.ಲಕ್ಷ್ಮಣ್, ಗೋಪಿಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಇದ್ದರು. | Kannada Prabha

ಸಾರಾಂಶ

ಸಂಘಟನಾ ಸೃಜನ ಅಭಿಯಾನ ರಾಹುಲ್ ಗಾಂಧಿಯವರ ಕನಸಿನ ಕೂಸು. ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್ ಪಕ್ಷದ ಸಂಘಟನೆ ಬಲವಾಗಿರಬೇಕು. ಅಧ್ಯಕ್ಷರ ಆಯ್ಕೆಯಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೂ ಮನ್ನಣೆ ದೊರಕಿಸಬೇಕೆಂಬ ಉದ್ದೇಶದಿಂದ ಎಐಸಿಸಿ ನಾಯಕರು ಹೊಸ ಸ್ವರೂಪ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಇದುವರೆಗೂ ಜಿಲ್ಲಾ ನಾಯಕರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿತ್ತು. ಇದೀಗ ಆ ಸ್ವರೂಪ ಬದಲಾಗಿದೆ. ತಾಲೂಕು, ಬ್ಲಾಕ್, ಬೂತ್ ಮಟ್ಟದ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದು ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ, ಮಂಡ್ಯ ಉಸ್ತುವಾರಿ ಸೈಮನ್ ಅಲೆಕ್ಸ್ ತಿಳಿಸಿದರು.

ಶನಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಂಘಟನಾ ಸೃಜನ ಅಭಿಯಾನ ರಾಹುಲ್ ಗಾಂಧಿಯವರ ಕನಸಿನ ಕೂಸು. ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್ ಪಕ್ಷದ ಸಂಘಟನೆ ಬಲವಾಗಿರಬೇಕು. ಅಧ್ಯಕ್ಷರ ಆಯ್ಕೆಯಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೂ ಮನ್ನಣೆ ದೊರಕಿಸಬೇಕೆಂಬ ಉದ್ದೇಶದಿಂದ ಎಐಸಿಸಿ ನಾಯಕರು ಹೊಸ ಸ್ವರೂಪ ನೀಡಿದ್ದಾರೆ. ಈಗಾಗಲೇ ೨೦ ರಾಜ್ಯಗಳಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವಿವರಿಸಿದರು.

ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷರ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾರ್ಯಕರ್ತರ ಒಟ್ಟಾರೆ ಅಭಿಪ್ರಾಯವನ್ನು ಪರಿಗಣಿಸಿ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವುದರಿಂದ ಪಕ್ಷದ ಸಂಘಟನಾ ಸಾಮರ್ಥ್ಯ ಹೆಚ್ಚುತ್ತದೆ. ಪಕ್ಷ ಸಂಘಟನೆಯಲ್ಲಿ ತೊಡಗಿರುವವರಿಗೆ ಅಧಿಕಾರ ಸಿಕ್ಕಂತಾಗುತ್ತದೆ ಎಂಬುದನ್ನು ಮನಗಂಡು ರಾಹುಲ್‌ಗಾಂಧಿ ಅವರು ಜಿಲ್ಲಾಧ್ಯಕ್ಷರ ಆಯ್ಕೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದರು.

ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಇಬ್ಬರು ಸಾಮಾನ್ಯ ವರ್ಗ, ಎಸ್‌ಸಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳೆ ಸೇರಿ ಆರು ಮಂದಿ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ವೆಬ್‌ಸೈಟ್, ವ್ಯಾಟ್ಸಾಪ್‌ಗಳಲ್ಲಿ ಅರ್ಜಿ ದೊರೆಯಲಿದ್ದು ಅದನ್ನು ಭರ್ತಿ ಮಾಡಬೇಕು. ನಂತರದಲ್ಲಿ ಅವುಗಳನ್ನು ಯಾರಿಗೆ ಸಲ್ಲಿಸಬೇಕು ಎಂಬುದನ್ನು ತಿಳಿಸುವುದಾಗಿ ಹೇಳಿದರು.

ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆಯಾದ ಅಭ್ಯರ್ಥಿಗಳ ಕುರಿತಂತೆ ಎಐಸಿಸಿಯಿಂದ ನೇಮಕಗೊಂಡಿರುವ ಉಸ್ತುವಾರಿಗಳು ಹಾಗೂ ವೀಕ್ಷಕರು ಪ್ರತಿ ತಾಲೂಕುಗಳಿಗೆ ತೆರಳಿ ಸ್ಥಳೀಯ ಮುಖಂಡರು, ಬೂತ್, ಬ್ಲಾಕ್, ಪಂಚಾಯ್ತಿ ಮಟ್ಟದ ಪಕ್ಷದ ಕಾರ್ಯಕರ್ತರು, ಎನ್‌ಜಿಓಗಳ ಮುಖ್ಯಸ್ಥರು, ಗ್ರಾಮಗಳ ಮುಖಂಡರಿಂದಲೂ ಅವರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು. ೨೫ ದಿನಗಳೊಳಗೆ ಅಭ್ಯರ್ಥಿಗಳ ಕುರಿತಂತೆ ವಿವರಗಳನ್ನೆಲ್ಲಾ ಸಂಗ್ರಹಿಸಿ ಎಐಸಿಸಿಗೆ ರವಾನಿಸಲಾಗುತ್ತದೆ. ಅಧ್ಯಕ್ಷರ ಆಯ್ಕೆ ನಿರ್ಧಾರವನ್ನು ಎಐಸಿಸಿ ಅಂತಿಮಗೊಳಿಸಲಿದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಯಾರ ಪ್ರಭಾವ, ಶಿಫಾರಸನ್ನೂ ಪರಿಗಣಿಸಲಾಗುವುದಿಲ್ಲ. ಯಾರ ಮನವಿಯನ್ನೂ ಸ್ವೀಕರಿಸುವುದಿಲ್ಲ. ಬಹುಮತದ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು. ಯಾರನ್ನೂ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ರಾಜ್ಯ ನಾಯಕರ ಪಾತ್ರ ಇದರಲ್ಲಿ ಇರುವುದೇ ಇಲ್ಲ. ಎಐಸಿಸಿಯಿಂದ ನೇಮಕಗೊಂಡ ಉಸ್ತುವಾರಿಗಳು, ವೀಕ್ಷಕರು ಕಳುಹಿಸುವ ೬ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಎಐಸಿಸಿ ಅಂತಿಮಗೊಳಿಸಲಿದೆ ಎಂದು ಸ್ಪಷ್ಟಪಡಿಸಿದರು.

ವೀಕ್ಷಕಿ ಮಂಜುಳಾ ನಾಯ್ಡು ಮಾತನಾಡಿ, ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಮತ್ತೊಂದು ಆಯಾಮದೆಡೆಗೆ ಹೊರಳಿದೆ. ಕಾರ್ಯಕರ್ತರ ಸ್ವಾತಂತ್ರ್ಯದ ಕೂಗನ್ನು ಪರಿಗಣಿಸಿ, ಅವರ ಧ್ವನಿಯಾಗಿ ನೈಜ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುವುದು. ಅರ್ಜಿ ಬಂದಾಕ್ಷಣ ಏಕಾಏಕಿ ಅವರನ್ನು ಆಯ್ಕೆ ಮಾಡಲಾಗುವುದಿಲ್ಲ. ಅಧ್ಯಕ್ಷರಾಗುವವರ ಹಿನ್ನೆಲೆ, ಪಕ್ಷಕ್ಕೆ ಅವರ ಕೊಡುಗೆ, ಕಾರ್ಯಕರ್ತರೊಂದಿಗಿನ ಸಂಪರ್ಕ, ಸಂಘಟನಾ ಸಾಮರ್ಥ್ಯ ಇವೆಲ್ಲವನ್ನೂ ಪರಿಗಣಿಸಲಾಗುವುದು. ಎಲ್ಲವನ್ನೂ ದಾಖಲು ಮಾಡಿ ಎಐಸಿಸಿಗೆ ಕಳುಹಿಸಲಾಗುವುದು ಎಂದು ನುಡಿದರು.

ನಾಳೆಯಿಂದಲೇ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ೨೫ ದಿನಗಳಲ್ಲಿ ಜಿಲ್ಲಾ ಪ್ರವಾಸ ಮುಗಿಸಿ ಎಲ್ಲಾ ಅಭಿಪ್ರಾಯಗಳನ್ನು ಕೋಢೀಕರಿಸಿ ಎಐಸಿಸಿಗೆ ಕಳುಹಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ನರೇಂದ್ರ, ವೀಕ್ಷಕರಾದ ಎಂ.ಲಕ್ಷ್ಮಣ್, ಗೋಪಿಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಗತ್ತಿನ ಸಾಂಸ್ಕೃತಿಕ ನಾಯಕ ಬಸವಣ್ಣ: ಸುತ್ತೂರು ಶ್ರೀ ಬಣ್ಣನೆ
ನೀಟ್‌ ಪ್ರಕರಣ: ಹೊಸ ಫ್ಲೆಕ್ಸ್ ಮೂಲಕ ಬಿಜೆಪಿಗೆ ಕೈ ನಾಯಕರ ಕೌಂಟರ್‌