ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ: ಡಿಸಿ ಮೀನಾ ನಾಗರಾಜ್‌

KannadaprabhaNewsNetwork | Published : Dec 3, 2023 1:00 AM

ಸಾರಾಂಶ

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ: ಡಿಸಿ ಮೀನಾ ನಾಗರಾಜ್‌

ರೈತರಿಂದ ರಾಗಿ ಖರೀದಿ ಸಂಬಂಧ ಡಿಸಿ ಕಚೇರಿಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆ

--

- ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿ ಖರೀದಿ ಏಜೆನ್ಸಿ

-ಪ್ರತಿ ಕ್ವಿಂಟಲ್ ರಾಗಿಗೆ 3,846 ರು. ದರ ನಿಗದಿ

- ಶೀಘ್ರ ರೈತರ ನೋಂದಣಿ ಕಾರ್ಯ ಆರಂಭ

--

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರದ ನಿರ್ದೇಶನದಂತೆ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ರಾಗಿ ಖರೀದಿ ಸಂಬಂಧ ನಡೆದ ಟಾಸ್ಕ್ ಪೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ ಇಲಾಖೆಯಿಂದ ಈಗಾಗಲೇ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಿಂದ ಬೆಳೆ ಮಾಹಿತಿಯನ್ನು ನೇರವಾಗಿ ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸ ಲಾಗುವುದು ಎಂದು ಹೇಳಿದರು. ಜಿಲ್ಲೆಗೆ ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಕ ಮಾಡಿದ್ದು, ಖರೀದಿ ಪ್ರಕ್ರಿಯೆ ಇವರ ಮುಖಾಂತರ ನಡೆಯುತ್ತದೆ. ಪ್ರತಿ ಕ್ವಿಂಟಲ್ ರಾಗಿಗೆ 3,846 ರು. ದರ ನಿಗದಿಪಡಿಸಲಾಗಿದೆ ಎಂದರು.

ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಶೀಘ್ರ ರೈತರ ನೋಂದಣಿ ಕಾರ್ಯ ಆರಂಭವಾಗಲಿದ್ದು, ನೋಂದಾಯಿತ ರೈತರಿಂದ ರಾಗಿಯನ್ನು ಬರುವ ಜನವರಿ 1 ರಿಂದ ಮಾರ್ಚ್‌ 31 ರವರೆಗೆ ಸರ್ಕಾರ ನಿಗಧಿಗೊಳಿಸಿದ ಮಾನದಂಡಗಳಿಗೆ ಅನುಗುಣವಾಗಿ ಖರೀದಿಸಲಾಗುವುದು. ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಲ್‌ನಂತೆ ರೈತರು ಹೊಂದಿರುವ ಜಮೀನಿಗೆ ಅನುಗುಣವಾಗಿ ರಾಗಿ ಖರೀದಿಸಲಾಗುವುದು ಎಂದು ಹೇಳಿದರು.ಜಿಲ್ಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಚಿಕ್ಕಮಗಳೂರಿನ ಎಪಿಎಂಸಿ ಯಾರ್ಡ್, ಕಡೂರು ತಾಲೂಕಿನ ಕಡೂರು ಎಪಿಎಂಸಿ ಯಾರ್ಡ್, ಬೀರೂರು ಎಪಿಎಂಸಿ ಯಾರ್ಡ್, ಪಂಚನಹಳ್ಳಿ ಎಪಿಎಂಸಿ ಯಾರ್ಡ್. ತರೀಕೆರೆ ತಾಲೂಕಿನ ತರೀಕೆರೆ ಎಪಿಎಂಸಿ, ಅಜ್ಜಂಪುರ ತಾಲೂಕಿನ ಅಜ್ಜಂಪುರ ಎಪಿಎಂಸಿ ಯಾರ್ಡ್‌ಗಳಲ್ಲಿ ರಾಗಿ ಖರೀದಿಸಲಾಗುವುದು ಎಂದರು. ರೈತರ ಫ್ರೂಟ್ಸ್ ಐಡಿ ಮಾಹಿತಿ ಪಡೆದು, ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಿ ರೈತರಿಂದ ಭತ್ತ ಖರೀದಿಸುವಂತೆ ತಿಳಿಸಿದ ಅವರು ಭತ್ತವನ್ನು ಸರಬರಾಜು ಮಾಡಿದ ರೈತರ ಬ್ಯಾಂಕ್ ಖಾತೆಗಳಿಗೆ 15 ದಿನದೊಳಗೆ ಡಿಬಿಟಿ ಮೂಲಕ ಹಣ ಜಮೆ ಮಾಡುವಂತೆ ಸೂಚಿಸಿದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ, ಕೆಎಫ್‌ಸಿಎಸ್‌ಸಿಯ ಜಿಲ್ಲಾ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತದ ಶಾಖಾ ವ್ಯವಸ್ಥಾಪಕರು ಹಾಜರಿದ್ದರು. 2 ಕೆಸಿಕೆಎಂ 1

Share this article