‘ಮಿಸ್ಟರ್ ಮದಿಮಯೆ’ ಇಂದು ಕರಾವಳಿಯಾದ್ಯಂತ ತೆರೆಗೆ

KannadaprabhaNewsNetwork |  
Published : Jan 12, 2024, 01:46 AM IST
ಮಿಸ್ಟರ್‌ ಮದಿಮಯೆ ಚಿತ್ರತಂಡದ ಪ್ರಮುಖರು. | Kannada Prabha

ಸಾರಾಂಶ

ಎಂಎಂಎಂ ಗ್ರೂಪ್ಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ‘ಮಿಸ್ಟರ್ ಮದಿಮಯೆ’ ತುಳು ಚಿತ್ರ ಜ.12ರಂದು ತೆರೆ ಕಾಣಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಎಂಎಂಎಂ ಗ್ರೂಪ್ಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ‘ಮಿಸ್ಟರ್ ಮದಿಮಯೆ’ ತುಳು ಚಿತ್ರ ಜ.12ರಂದು ತೆರೆ ಕಾಣಲಿದೆ ಎಂದು ಹಿರಿಯ ನಟ ಸಾಯಿಕೃಷ್ಣ ಕುಡ್ಲ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಿಸ್ಟರ್ ಮದಿಮಯೆ’ ಸಿನೆಮಾ ಮಂಗಳೂರಿನ ಬಿಗ್ ಸಿನಿಮಾಸ್, ಸಿನಿಪೊಲಿಸ್, ಪಿವಿಆರ್, ಸುರತ್ಕಲ್‌ನ ಸಿನಿಗ್ಯಾಲಕ್ಸಿ, ಪಡುಬಿದ್ರಿಯ ಬಿಗ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದ ಸಂತೋಷ್ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ. ಉಡುಪಿಯ ಕಲ್ಪನಾ ಮತ್ತು ಮಂಗಳೂರಿನ ರೂಪವಾಣಿ ಥಿಯೇಟರ್‌ನಲ್ಲಿ ಜ.19ರಂದು ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.ಮದುವೆ ಸಮಾರಂಭದ ಸುತ್ತ ನಡೆಯುವ ಕತೆಗೆ ಹಾಸ್ಯದ ಲೇಪನ ಹಚ್ಚಲಾಗಿದೆ. ಜತೆಗೆ ಸೆಂಟಿಮೆಂಟ್ ಕೂಡ ಇದೆ. ಪ್ರೇಕ್ಷಕರ ಅಭಿರುಚಿಯನ್ನು ಅರಿತು ಸಿನಿಮಾದ ಕತೆ ಹೆಣೆಯಲಾಗಿದೆ. ಕ್ಲೈಮಾಕ್ಸ್ ವಿಭಿನ್ನತೆಯಿಂದ ಹೊಂದಿದ್ದು, ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸಲಿದೆ ಎಂದರು.ಬಳಿಕ ಮಾತಾಡಿದ ಪ್ರಕಾಶ್ ಪಾಂಡೇಶ್ವರ್, ಹೊಸಬರ ತಂಡ ಒಂದೊಳ್ಳೆಯ ಪ್ರಯತ್ನ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹಿಸಿದಲ್ಲಿ ನಿರ್ಮಾಪಕರು ಇನ್ನಷ್ಟು ಸಿನಿಮಾ ಮಾಡಲು ಪ್ರೇರಣೆಯಾಗಲಿದೆ ಎಂದರು.ಈ ಸಿನೆಮಾಕ್ಕೆ ಒಂದೇ ಹಂತದಲ್ಲಿ ಸುಮಾರು 20 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದು ಸಾಯಿಕೃಷ್ಣ ತಿಳಿಸಿದರು.ನವೀನ್ ಜಿ ಪೂಜಾರಿ ನಿರ್ದೇಶನದ ಈ ಸಿನಿಮಾದ ನಾಯಕನಾಗಿ ಸಾಯಿಕೃಷ್ಣ ಕುಡ್ಲ ಅವರು ನಟಿಸುತ್ತಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಶ್ವೇತಾ ಸುವರ್ಣ, ರವಿಕಾಂತ್ ಪೂಜಾರಿ, ಜ್ಯೋತಿಷ್ ಶೆಟ್ಟಿ, ಸುನೀಲ್ ನೆಲ್ಲಿಗುಡ್ಡೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪಿಂಕಿ ರಾಣಿ, ರವಿ ರಾಮಕುಂಜ, ಪ್ರಕಾಶ್ ಪಾಂಡೇಶ್ವರ್, ಕಾಮಿಡಿ ಗ್ಯಾಂಗ್ ಖ್ಯಾತಿಯ ಮನೀಷ್ ಶೆಟ್ಟಿ ಉಪ್ಪಿರ, ಅಕ್ಷಯ್ ಸರಿಪಲ್ಲ, ಸಂದೀಪ್ ಶೆಟ್ಟಿ ರಾಯಿ, ಶರಣ್ ಕೈಕಂಬ, ಪ್ರವೀಣ್ ಮರ್ಕಮೆ, ಉತ್ಸವ್ ವಾಮಂಜೂರು, ಸವ್ಯರಾಜ್ ಕಲ್ಲಡ್ಕ, ಪ್ರಥ್ವಿನ್ ಪೊಳಲಿ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಮಿಥುನ್ ಕೆ.ಎಸ್. ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ರಾಜೇಶ್ ಫೆರಾವೋ ಸಹ ನಿರ್ಮಾಪಕರು. ಕೆ.ಪಿ. ಮಿಲನ್ ಸಂಗೀತ ಹಾಗೂ ಪ್ರಶಾಂತ್ ಧರ್ಮಸ್ಥಳ ಅವರ ಛಾಯಾಗ್ರಹಣ ಇದೆ. ನವೀನ್ ಆರ್ಯನ್ ಮತ್ತು ವಿನೋದ್ ನೃತ್ಯ ಸಂಯೋಜಿಸಿದ್ದಾರೆ. ಕೌರವ್ ವೆಂಕಟೇಶ್ ಅವರ ಸಾಹಸ, ಸುಕೇಶ್ ಶೆಟ್ಟಿ, ಜಿ.ಎಸ್ ಗುರುಪುರ ಅವರ ಸಾಹಿತ್ಯ, ಸುಜೀತ್ ನಾಯಕ್ ಸಂಕಲನ ಇದೆ‌. ಚಿತ್ರವನ್ನು ಸಚಿನ್ ಎ.ಎಸ್. ಕರಾವಳಿದ್ಯಾದಂತ ವಿತರಿಸುತ್ತಿದ್ದಾರೆ. ಗೋಷ್ಠಿಯಲ್ಲಿ ನಟಿ ಶ್ವೇತಾ ಸುವರ್ಣ, ಸುನಿಲ್ ನೆಲ್ಲಿಗುಡ್ಡೆ, ನಿರ್ಮಾಪಕ ಮಿಥುನ್ ಕೆ.ಎಸ್, ಎಡಿಟರ್ ಸುಜಿತ್ ನಾಯಕ್, ಮೆನೇಜರ್ ಹೆರಾಲ್ಡ್, ನಿರ್ದೇಶಕ ನವೀನ್ ಜಿ. ಪೂಜಾರಿ, ಸಂಗೀತ ನಿರ್ದೇಶಕ ಮಿಲನ್, ಚಿತ್ರ ವಿತರಕ ಸಚಿನ್ ಎ.ಎಸ್. ಉಪ್ಪಿನಂಗಡಿ, ರಾಜೇಶ್ ಫೆರಾವೋ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಪಾಲಿಗೆ ವೈದ್ಯರು ದೇವರಾಗಿ, ರಾಕ್ಷಸರಾಗಬೇಡಿ: ಡಿಸಿ ಸಂಗಪ್ಪ
ನಾಡಿದ್ದು ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ