ರಾಸಾಯನಿಕಗಳ ಬಳಕೆಯಿಂದ ಉತ್ಪಾದಕತೆ ಕುಂಠಿತ

KannadaprabhaNewsNetwork |  
Published : Jun 12, 2026, 02:00 AM IST
ರಾಸಾಯನಿಕ ಕೃಷಿ ಕಡಿಮೆ ಮಾಡಿ ಸಾವಯವ, ಸುಸ್ಥಿರ, ಸ್ವಾವಲಂಬಿ ಕೃಷಿಗೆ ಮುಂದಾಗಿ : ಡಾ. ಪವನ್ | Kannada Prabha

ಸಾರಾಂಶ

ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಇವರ ಸಹಯೋಗದೊಂದಿಗೆ ಖೇತ್ ಬಚಾವೋ ಆಂದೋಲನ ಮತ್ತು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ,

ಕನ್ನಡಪ್ರಭವಾರ್ತೆ ತಿಪಟೂರು

ರಾಸಾಯನಿಕ ಕೃಷಿ ಪದ್ಧತಿಯಿಂದ ರಾಸಾಯನಿಕ ಗೊಬ್ಬರಗಳ ಹಾಗೂ ಪೀಡೆನಾಶಕಗಳ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಸಸ್ಯ, ಪ್ರಾಣಿ ಸಂಕುಲಗಳು ಮಲಿನಗೊಳ್ಳುತ್ತ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕಗುಣ ಧರ್ಮಗಳು ಕ್ಷೀಣಿಸುತ್ತಿದ್ದು ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ಪವನ್ ಎಂ.ಪಿ ತಿಳಿಸಿದರು.

ತಾಲೂಕು ಕೃಷಿ ಇಲಾಖೆ, ಹಾಗೂ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಇವರ ಸಹಯೋಗದೊಂದಿಗೆ ಖೇತ್ ಬಚಾವೋ ಆಂದೋಲನ ಮತ್ತು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ, ವಿಶ್ವ ಪರಿಸರ ಆಚರಣೆ ಪ್ರಯುಕ್ತ ಕಿಬ್ಬನಹಳ್ಳಿ ಹೋಬಳಿ ಬೀರಸಂದ್ರ ಗ್ರಾಮದಲ್ಲಿ ರೈತರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದರು.

ಸಾವಯವ ಕೃಷಿ ನಮ್ಮ ದೇಶದಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ. ಸುಸ್ಥಿರ ಇಳುವರಿ, ಉತ್ತಮ ಆಹಾರ, ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕಾಪಾಡಲು, ಉತ್ಪಾದನಾ ವೆಚ್ಚ ಕಡಿಮೆ ಮಾಡಲು, ಕ್ಷೀಣಿಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ, ಕೃಷಿಯನ್ನು ಸ್ವಾವಲಂಬಿಗೊಳಿಸಲು ಸಾವಯವ ಕೃಷಿಗೆ ಹೆಚ್ಚಿನ ಮಹತ್ವಕೊಡಲಾಗುತ್ತಿದೆ ಎಂದರು. ಕೃಷಿ ವಿಜ್ಞಾನಿ ಡಾ. ದರ್ಶನ್ ಮಾತನಾಡುತ್ತಾ ಸಾವಯವ ಕೃಷಿಯಲ್ಲಿ ಗಮನಿಸಬೇಕಾದ ಅಂಶಗಳೆಂದರೆ ಕಡಿಮೆ ಉಳುಮೆ, ಸಾವಯವ ಗೊಬ್ಬರಗಳು, ಹಿಂಡಿಗಳನ್ನು ಬೆಳೆಗಳಲ್ಲಿ ಬಳಕೆ ಮಾಡುವುದು, ಹಸಿರೆಲೆ ಗೊಬ್ಬರ ಗಿಡಗಳನ್ನು ಬೆಳೆಸಿ ಮಣ್ಣಿಗೆ ಸೇರಿಸುವುದು, ಪೋಷಕಾಂಶ ಪೂರೈಕೆಗೆ ಜೈವಿಕ ಗೊಬ್ಬರಗಳ ಬಳಕೆ ಮಾಡುವುದು. ಕಳೆ ನಿಯಂತ್ರಿಸಲು ಮಣ್ಣಿನ ತೇವಾಂಶ ಕಾಪಾಡಲು ಹಾಗೂ ಜೈವಿಕಕ್ರಿಯೆ ಹೆಚ್ಚಿಸಲು ಹೊದಿಕೆ ಬೆಳೆ ಅಥವಾ ಹೊದಿಕೆಯನ್ನ ಬಳಸುವುದು. ಬೆಳೆ ಪರಿವರ್ತನೆ, ರೋಗ ನಿರೋಧಕ ತಳಿಗಳು, ಕೀಟಾಕರ್ಷಕ ಬೆಳೆಗಳನ್ನು ಬೆಳೆಯುವುದು, ಸಮಗ್ರ ಬೆಳೆ ಪದ್ಧತಿಗಳು, ಅಂತರ ಬೆಳೆಗಳು, ಮಿಶ್ರ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ಎಲ್ಲಾ ಕೃಷಿತ್ಯಾಜ್ಯ ವಸ್ತುಗಳನ್ನು ಮರು ಬಳಕೆ ಮಾಡುವುದರಿಂದ ಮಣ್ಣಿನ ಆರೋಗ್ಯ ಕಾಪಾಡುವುದರ ಮೂಲಕ ಸುಸ್ಥಿರ ಇಳುವರಿಯನ್ನು ಪಡೆಯಬಹುದು. ಪರಿಸರ ಮಾಲಿನ್ಯ ತಡೆಗಟ್ಟಿ ಪರಿಸರದ ಆರೋಗ್ಯ ಕಾಪಾಡುವುದು. ಕೃಷಿ ಉತ್ಪಾದನೆಯಲ್ಲಿ ವೆಚ್ಚ ಕಡಿಮೆ ಮಾಡಬಹುದು ಎಂದು ತಿಳಿಸಿದರು. ಕೃಷಿ ಅಧಿಕಾರಿ ದಿವ್ಯ ಬೀಜಾಮೃತ ತಯಾರಿಸುವ ವಿವರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ಬೀಜಾಮೃತ. ಪ್ರಗತಿಪರರೈತರಾದ ಗುರುಮೂರ್ತಿ ಹಾಗೂ ಮೋಹನ್‌ರವರು ಮಾತನಾಡುತ್ತಾ ಯಾವುದೇ ಬೆಳೆಗಳ ಬಿತ್ತನೆ ಬೀಜಗಳಿಗೆ ಬೀಜಾಮೃತದಿಂದ ಬೀಜೋಪಚಾರ ಮಾಡಿ, ನೆರಳಿನಲ್ಲಿ ಒಣಗಿಸಿ ನಂತರ ಬಿತ್ತನೆ ಮಾಡಬಹುದು. ಇದರಿಂದ ಬೀಜದ ಮೂಲಕ ಹರಡುವ ರೋಗಗಳನ್ನು ತಡೆಗಟ್ಟಬಹುದು. ನಾಟಿ ಮಾಡುವ ಸಸಿಗಳನ್ನು ಕೂಡ ಬೀಜಮೃತದಿಂದ ಅದ್ದಿ ನಂತರ ನಾಟಿ ಮಾಡಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಕೃಷಿಕ ಸಮಾಜದ ಸದಸ್ಯರಾದ ಸದಾಶಿವಯ್ಯ, ಪ್ರಗತಿಪರ ರೈತರಾದ ಅಶೋಕ, ಬಸವರಾಜು, ವಿಭಾ, ಆತ್ಮಯೋಜನೆ ಹಾಗೂ ಬಿಳಿಗೆರೆ ಕ್ಲಸ್ಟರ್ ನ ಸಾವಯವ ಕೃಷಿಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಕ್ಕೆಜೋಳದ ಬೀಜಕ್ಕೆ ಒಂದೇ ಬೆಲೆ ನಿಗದಿಗೆ ಒತ್ತಾಯಿಸಿ ಪ್ರತಿಭಟನೆ
ನಂದಿಪುರ ಚರಂತಪ್ಪಜ್ಜ ಶ್ರೀಗಳ 22ನೇ ಸ್ಮರಣೋತ್ಸವಕ್ಕೆ ಚಾಲನೆ