ಕುಡಿವ ನೀರು, ಮೇವಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ: ಶಾಸಕ

KannadaprabhaNewsNetwork |  
Published : Jun 12, 2026, 02:00 AM IST
೧೦ಕೆಎಲ್‌ಆರ್-೭ಕೋಲಾರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ನಿಗಾ ವಹಿಸಬೇಕು. ಹಾಗೇಯೇ ಜಾನುವಾರುಗಳ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಕೋಲಾರಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ನಿಗಾ ವಹಿಸಬೇಕು. ಹಾಗೇಯೇ ಜಾನುವಾರುಗಳ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ (ಕಾರ್ಯಪಡೆ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಟಾಸ್ಕ್ ಫೋರ್ಸ್ ಕಮಿಟಿ ಎಂದರೆ ಆಟಾಟಿಕೆ ಅಥವಾ ಬೂಟಾಟಿಕೆಯಲ್ಲ. ಜನರಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸಮಸ್ಯೆಗಳನ್ನು ಬಗೆಹರಿಸುವುದೇ ಈ ಸಮಿತಿಯ ಮುಖ್ಯ ಉದ್ದೇಶ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ವಿರುದ್ಧ ರೆಸಲ್ಯೂಷನ್ (ಠರಾವು) ಪಾಸ್ ಮಾಡುವಂತೆ ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಿದರು.ಜಾನುವಾರುಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತ್ರ ಉತ್ತರಿಸುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಗ್ರಾಮೀಣ ಭಾಗದಲ್ಲಿ ಎಲ್ಲೂ ಮೇವಿನ ಕೊರತೆ ಉಂಟಾಗಬಾರದು. ಒಂದು ವೇಳೆ ಸಮಸ್ಯೆ ಕಂಡು ಬಂದಲ್ಲಿ ಸಂಬಂಧಪಟ್ಟ ರಾಜಸ್ವ ನಿರೀಕ್ಷಕರನ್ನೇ (ಆರ್.ಐ) ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.ನಮ್ಮ ಜಿಲ್ಲೆಯ ರೈತರು ಕೊಂಡೊಯ್ಯುವ ಗೊಬ್ಬರವನ್ನು ಆಂಧ್ರಪ್ರದೇಶದ ಗಡಿಭಾಗದಲ್ಲಿ ಅಲ್ಲಿನ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಸಮಸ್ಯೆಗೆ ಬ್ರೇಕ್ ಹಾಕಲು ಈ ಬಾರಿ ಹೋಬಳಿ ಮಟ್ಟದಲ್ಲೇ ಗೊಬ್ಬರವನ್ನು ವಿತರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.ನೀರಿನ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನೀರಿನ ಸಮಸ್ಯೆ ಎದುರಾದಾಗ ಕೋಲಾರ ಜಿಲ್ಲೆಗೆ ಮಾತ್ರ ಪ್ರತ್ಯೇಕ ಆದೇಶವಿದ್ದು, ಅನುದಾನದ ಕೊರತೆ ಇಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು, ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಬೋರ್‌ವೆಲ್ ಕೆಟ್ಟು ನಿಂತರೆ ಅಥವಾ ಟ್ರಾನ್ಸ್‌ಫಾರ್ಮರ್ (ಟಿಸಿ) ಸಮಸ್ಯೆ ಎದುರಾದಾಗ ಪಿಡಿಒಗಳು ಕೂಡಲೇ ಕೆಇಬಿ ಅಧಿಕಾರಿಗಳ ಗಮನಕ್ಕೆ ತರಬೇಕು. ಜೊತೆಗೆ ಇಓ, ತಹಸೀಲ್ದಾರ್ ಅಥವಾ ನನ್ನ ಗಮನಕ್ಕೆ ತರಬೇಕು ಎಂದು ತಿಳಿಸಿದರು.ಇದೇ ವೇಳೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಹರಿಕೃಷ್ಣ ಅವರಿಗೆ ಸಭೆಯಿಂದಲೇ ದೂರವಾಣಿ ಕರೆ ಮಾಡಿದ ಶಾಸಕರು, ನರಸಾಪುರ ಗ್ರಾಮದ ಸರ್ಕಾರಿ ಆಸ್ಪತ್ರೆ ಹಾಗೂ ನಾಡ ಕಚೇರಿಗೆ ಕೂಡಲೇ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಎಚ್. ಶ್ರೀನಿವಾಸ್, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಒಗಳೇ ಸುಪ್ರೀಂ ಇದ್ದಂತೆ. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಕೋಲಾರ ತಾಲೂಕು ಕಚೇರಿಯಲ್ಲಿ ದೂರುಗಳ ಸ್ವೀಕಾರಕ್ಕೆ ೨೪*೭ ಕಾರ್ಯನಿರ್ವಹಿಸುವ ೦೮೧೫೨೨೨೨೦೦೭ ಮತ್ತು ೦೮೧೫೨೨೨೨೦೫೬ ಹೆಲ್ಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ದಾರಿ ಹಾಗೂ ಸ್ಮಶಾನದ ಜಾಗ ಮತ್ತು ಸರ್ಕಾರಿ ಜಮೀನು ಸಂಬಂಧಿಸಿದ ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಬಳಿ ಬನ್ನಿ, ಬಗೆಹರಿಸೋಣ. ಸರ್ಕಾರಿ ಜಮೀನನ್ನು ಸಂರಕ್ಷಿಸುವುದು ಮೊದಲ ಆದ್ಯತೆಯಾಗಿದೆ. ಕರ್ತವ್ಯದಲ್ಲಿ ಲೋಪವೆಸಗಿದರೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಟಾಸ್ಕ್ ಪೋರ್ಸ್ ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ಮಂಜುನಾಥ್, ನಗರಸಭೆ ಪೌರಾಯುಕ್ತ ವೆಂಕಟೇಶ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆಯ ಜಬೀವುಲ್ಲಾ, ವೇಮಗಲ್ ಕುರಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಕ್ಕೆಜೋಳದ ಬೀಜಕ್ಕೆ ಒಂದೇ ಬೆಲೆ ನಿಗದಿಗೆ ಒತ್ತಾಯಿಸಿ ಪ್ರತಿಭಟನೆ
ನಂದಿಪುರ ಚರಂತಪ್ಪಜ್ಜ ಶ್ರೀಗಳ 22ನೇ ಸ್ಮರಣೋತ್ಸವಕ್ಕೆ ಚಾಲನೆ