ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರೊ.ಬಿಕೆ ರವರು ದಲಿತ ಮತ್ತು ದಲಿತೇತರ ಶೋಷಿತ ಸಮುದಾಯ ಒಟ್ಟುಗೂಡಿಸಿಕೊಂಡು ಸಂಘಟನೆ ಕಟ್ಟಿದ ರೀತಿ, ಸೈದ್ಧಾಂತಿಕವಾಗಿ ಅವರಿಗಿದ್ದ ಬದ್ಧತೆ ಮತ್ತು ವೈಯಕ್ತಿಕವಾಗಿ ಪ್ರಾಮಾಣಿಕರಾಗಿದ್ದರಿಂದ ಕರ್ನಾಟಕದ ದಲಿತರು ಅವರನ್ನು ತಮ್ಮ ನಾಯಕನನ್ನಾಗಿ ಒಪ್ಪಿಕೊಂಡರು.
ಬಿಕೆ ನೇತೃತ್ವದಲ್ಲಿ ದಲಿತ ಚಳುವಳಿ ರೂಪಿಸಿದ ಹೋರಾಟಗಳು ಕೇವಲ ದಲಿತ ಸಮುದಾಯದ ಮೇಲಾಗುವ ಅನ್ಯಾಯ, ದೌರ್ಜನ್ಯ ವಿರುದ್ಧ ಪ್ರತಿಭಟಿಸುವುದಕ್ಕಷ್ಟೇ ಸೀಮಿತವಾಗಲಿಲ್ಲ. ಅವರ ಹೋರಾಟಗಳು ಸಮಾಜದಲ್ಲಿ ಭೂಮಿ, ವಿದ್ಯೆ, ಉದ್ಯೋಗದಂತಹ ಕ್ಷೇತ್ರಗಳಲ್ಲಿ ಬದಲಾವಣೆ ತರಬಲ್ಲ ಯೋಜನೆಗಳಾಗಿ ಜಾರಿಯಾಗುವುದಕ್ಕೆ ಕಾರಣವಾದವು. ಕರ್ನಾಟಕದ ವಿವಿಧ ಭಾಗಗಳಲ್ಲಿ ದಸಂಸ ನಡೆಸಿದ ಹೋರಾಟಗಳು ಸಾವಿರಾರು ಎಕರೆ ಭೂಮಿ ಹಂಚಿಕೆಯಾಗಲು ಕಾರಣವಾದವು. ದಸಂಸ ಹೋರಾಟದಿಂದ ಸ್ಥಾಪನೆಯಾದ ವಸತಿ ಶಾಲೆಗಳು, ದೊರಕಿಸಿಕೊಟ್ಟ ಸರ್ಕಾರಿ ಉದ್ಯೋಗಗಳು, ಕೇವಲ ದಲಿತ ಸಮುದಾಯಕ್ಕಷ್ಟೇ ಅಲ್ಲದೆ ಒಟ್ಟು ಸಮಾಜದ ಬದಲಾವಣೆಗೆ ಕಾರಣವಾದವು.ವಿಶ್ವ ಮಟ್ಟದ ಪ್ರಾಮುಖ್ಯತೆ ಪಡೆದಿದ್ದ ಚಂದ್ರಗುತ್ತಿ ಬೆತ್ತಲೆ ಸೇವೆ ಹೋರಾಟವು ಮಹಿಳೆಯರ ವಿಮೋಚನೆ ಹೋರಾಟದ ಮೇರು ದಾಖಲೆಯಾಗಿದೆ. ಈ ಹೋರಾಟದಲ್ಲಿ ನಾನು ಕೂಡಾ ಭಾಗಿಯಾಗಿದ್ದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಕರ್ನಾಟಕಕ್ಕೆ ಅಂಬೇಡ್ಕರ್‌ರನ್ನು ಪರಿಚಯಿಸಿದ್ದು ಮಾತ್ರವಲ್ಲ ಶೋಷಿತರಲ್ಲಿ ಅವ್ವ ಸಂಸ್ಕೃತಿ ಮೈತ್ರಿಯನ್ನು ಮುನ್ನಡೆಸಿದ ಕೀರ್ತಿಯು ಪ್ರೊ.ಬಿಕೆ ಯವರಿಗೆ ಸಲ್ಲುತ್ತದೆ ಎಂದರು.