ಮದ್ದೂರು: ಒಕ್ಕಲಿಗರು ಸಂಸ್ಕೃತಿಹೀನರು ಎಂದು ಅವಹೇಳಿಕಾರಿ ಹೇಳಿಕೆ ಖಂಡಿಸಿ ಪ್ರೊ.ಕೆ.ಎಸ್. ಭಗವಾನ್ ವಿರುದ್ಧ ತಾಲೂಕಿನ ಒಕ್ಕಲಿಗರ ಸಮುದಾಯದವರು ಪಟ್ಟಣದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಆಕ್ರೋಶಭರಿತ ಒಕ್ಕಲಿಗ ಸಮುದಾಯದ ಜನರು ಭಗವಾನ್ ಭಾವಚಿತ್ರವುಳ್ಳ ಫ್ಲೆಕ್ಸ್‌ಗೆ ಚಪ್ಪಲಿ ಸೇವೆ ಮಾಡಿ ಬೆಂಕಿ ಹಾಕಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಪ್ರತಿಭಟನೆಗಿಳಿದ ಸಮುದಾಯದ ಜನರು, ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಧರಣಿ ನಡೆಸಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಕೆ.ಎಸ್. ಭಗವಾನ್ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಭಗವಾನ್ ರನ್ನು ತಮ್ಮ ವಶಕ್ಕೆ ನೀಡಿದರೆ ಒಕ್ಕಲಿಗರ ಸಂಸ್ಕೃತಿ ಏನು ಎಂಬುದನ್ನು ಪಾಠ ಕಲಿಸುವುದಾಗಿ ಕಿಡಿಕಾರಿದರು. ಕೋಮು ಗಲಭೆ ಸೃಷ್ಠಿಸುವ ಹೇಳಿಕೆಯಿಂದ ಇಡೀ ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿರುವ ಈತನನ್ನು ಸರ್ಕಾರ ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ ಮಾತನಾಡಿದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಪ್ರೊ. ಬಿ. ಕೃಷ್ಣ, ಒಕ್ಕಲಿಗರು ಸಂಸ್ಕೃತಿ ಹೀನರು ಎನ್ನುವ ಭಗವಾನ್ ಧೋರಣೆ ಅವಿವೇಕತನದಿಂದ ಕೂಡಿದೆ. ಒಕ್ಕಲಿಗರು ಬೆಳೆದು ಕೊಟ್ಟ ಅನ್ನವನ್ನು ತಿನ್ನುವ ಈ ಭಗವಾನ್‌ಗೆ ನಾಗರಿಕತೆಯ ಅರಿವಿಲ್ಲ. ಒಕ್ಕಲಿಗರ ಸಮುದಾಯವನ್ನು ವಿರೋಧಿ ಮಾತನಾಡುವ ಭಗವಾನ್ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ ಮಾತನಾಡಿ, ಇಡೀ ದೇಶಕ್ಕೆ ಅನ್ನ ಕೊಡುವ ರೈತ ಒಕ್ಕಲಿಗನಾಗಿದ್ದಾನೆ. ಇಂತಹ ಜನಾಂಗವನ್ನು ಅವಹೇಳನಕಾರಿಯಾಗಿ ಟೀಕಿಸುವ ಭಗವಾನ್ ಓರ್ವ ಕೆಟ್ಟ ಸಾಹಿತಿ. ಇವರನ್ನು ನಾಡಿನ ಹಿರಿಯ ಸಾಹಿತಿಗಳು ತಿರಸ್ಕರಿಸಬೇಕು ಎಂದು ಕಿವಿಮಾತು ಹೇಳಿದರು. ಪ್ರತಿಭಟನೆಯಲ್ಲಿ ನಾಡಪ್ರಭು ಒಕ್ಕಲಿಗರ ಸಂಘದ ವಿ.ಟಿ. ರವಿಕುಮಾರ್, ಸಿ.ಎಸ್. ಶಂಕರಯ್ಯ, ಕೆ.ಬಿ. ನಾರಾಯಣ, ಸಿ. ಸುರೇಶ, ತಿಪ್ಪೂರು ರಾಜೇಶ, ಗೊರವನಹಳ್ಳಿ ಪ್ರಸನ್ನ, ಜಿ.ಸಿ. ಮಹೇಶ, ದೇವರಹಳ್ಳಿ ವೆಂಕಟೇಶ್, ಬಿ.ವಿ. ಶಂಕರೇಗೌಡ, ಅವಿನಾಶ್, ನ.ಲಿ. ಕೃಷ್ಣ, ರವಿ ಚನ್ನಸಂದ್ರ, ಎಂ.ಸಿ. ಶಶಿಗೌಡ, ಅಜ್ಜಹಳ್ಳಿ ರಮೇಶ, ದೊರೆಸ್ವಾಮಿ ಮತ್ತಿತರರಿದ್ದರು.