ಕಾರ್ಕಳ: ಪ್ರೊ. ರಾಮಚಂದ್ರ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಮಹಾಬಲ ಕೆ. ಮರವಂತೆ ಆಯ್ಕೆಯಾಗಿದ್ದಾರೆ.
ಶಾಲೆಗಳಲ್ಲಿ ಶಾಲಾ ವಾರ್ಷಿಕ ಸಂಚಿಕೆ, ಚಿತ್ರ ಕಲೆ, ಕ್ರಾಫ್ಟ್, ಶಿಶು ಗೀತೆ, ಕತೆ,ಕವನ ರಚನೆ ಅಲ್ಲದೆ ಪರಿಸರ ಉಳಿಸಿ ಬೆಳೆಸುವ ಕಾರ್ಯಗಳಲ್ಲಿ ಮಕ್ಕಳು ಕ್ರಿಯಾಶೀಲರಾಗಿ ಭಾಗವಹಿಸುವಂತೆ ಮಾಡುವ ಇವರು ಇಂದೇ ಶಾಲೆಗೆ ಬಾರಮ್ಮ,ಗಾನ ವನಸಿರಿ ಮಕ್ಕಳ ಕವನ ಸಂಕಲನ ಬಿಡುಗಡೆಯಾಗಿದೆ. ಇವರ ನೆನಪಿನೋಲೆ ಕವನಕ್ಕೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಬಂದಿದೆ. ಮರೆಯಲಾಗದ ಮಂಜಯ್ಯ ಮಾಸ್ತರ್ ಮಕ್ಕಳ ಕತೆ ಶಿಕ್ಷಣ ಇಲಾಖೆಯಿಂದ ಪಠ್ಯ ಪೂರಕ ಕಥಾ ಪುಸ್ತಕವಾಗಿದೆ.ತಾನು ಕರ್ತವ್ಯ ನಿರ್ವಹಿಸಿದ ಶಾಲೆಗೆ ಕ್ಲಸ್ಟರ್ ಮಟ್ಟದ ಉತ್ತಮ ಶಾಲೆ ಪ್ರಶಸ್ತಿ, ಪರಿಸರ ಇಲಾಖೆ ಹಾಗೂ ಜಿಲ್ಲಾಡಳಿತ ಏರ್ಪಡಿಸಿದ್ದ ಪರಿಸರ ಮಿತ್ರ ಶಾಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿ, ಹಳದಿ ಶಾಲೆ ಪ್ರಶಸ್ತಿ, ಶಾಲಾ ವಾರ್ಷಿಕ ಸಂಚಿಕೆಗೆ ಪ್ರಶಸ್ತಿ ಗಳಿಸಿ ಕೊಟ್ಟವರು. ಮಕ್ಕಳ ಕವನ ರಚನಾ ಶಿಬಿರ, ಬೇಸಿಗೆ ರಜಾ ಶಿಬಿರ, ಸಂಘ ಸಂಸ್ಥೆಗಳು ಏರ್ಪಡಿಸಿದ್ದ ಅನೇಕ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಒಬ್ಬ ಬಹುಮುಖ ಪ್ರತಿಭೆಯ ಶಿಕ್ಷಕರಾಗಿರುವ ಇವರು ಕನ್ನಡನಾಡು ನುಡಿಯ ಸೇವೆಯಲ್ಲಿ ನಿಷ್ಠೆಯಿಂದ ತೊಂಡಗಿಸಿಕೊಂಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಜು. 20ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ಸಾಹಿತ್ಯ ಸಂಘದ ಅಧ್ಯಕ್ಷ ಕೆ.ಪಿ. ಶೆಣೈ ಅವರ ಅಧ್ಯಕ್ಷತೆಯಲ್ಲಿ ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿರೇಶಾನಂದ ಸರಸ್ವತೀ ಹಾಗೂ ಉಡುಪಿ ಡಯಟ್ ಪ್ರಾಚಾರ್ಯ ಅಶೋಕ್ ಕಾಮತ್ ಉಪಸ್ಥಿತಿಯಲ್ಲಿ ನಡೆಯಲಿದೆ.