ಪ್ರೊ. ಎಸ್. ಎಸ್. ಬಸವನಾಳ ಪುಣ್ಯ ಪುರುಷರು: ಡಾ. ರುದ್ರೇಶ ಮೇಟಿ

KannadaprabhaNewsNetwork |  
Published : Nov 10, 2025, 01:30 AM IST
ಮದಮದಮ | Kannada Prabha

ಸಾರಾಂಶ

ಕೆಎಲ್‌ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರೊ. ಶಿ.ಶಿ. ಬಸವನಾಳ ಅವರ ಬದುಕು-ಬರಹ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡಯಿತು.

ಧಾರವಾಡ: ಪ್ರೊ. ಎಸ್. ಎಸ್. ಬಸವನಾಳ ಅವರು ಎಲ್ಲರಂತೆ ಬದುಕದೇ ಎಲ್ಲರಿಗಾಗಿ ಲೇಸೆನಿಸಿಕೊಂಡು ಬದುಕಿದ ಪುಣ್ಯ ಪುರುಷರು. ತಮ್ಮ ಜೀವನವನ್ನೇ ಸಾರ್ವಜನಿಕ ಸೇವೆ, ಕನ್ನಡ ಸಾಹಿತ್ಯದ ಉನ್ನತಿಗಾಗಿ ಶ್ರಮಿಸಿದ ಮಹಾ ಕಾಯಕ ಯೋಗಿಗಳು ಎಂದು ಅಂಜುಮನ್‌ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ರುದ್ರೇಶ ಮೇಟಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘ ಕೆಎಲ್‌ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪ್ರೊ.ಶಿ.ಶಿ. ಬಸವನಾಳ ಅವರ ಬದುಕು-ಬರಹ’ ವಿಷಯ ಕುರಿತು ಮಾತನಾಡಿದರು.

ಆಗಿನ ಮುಂಬೈ ಪ್ರಾಂತದ ಪುಣೆಯ ಡೆಕ್ಕನ್‌ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು, ಪುಣೆಯಂತೆ ಉತ್ತರ ಕರ್ನಾಟಕದಲ್ಲಿ ಗುಣಾತ್ಮಕ ಶಿಕ್ಷಣ ನೀಡುವಂತಹ ಶಿಕ್ಷಣ ಸಂಸ್ಥೆ ಕಟ್ಟಬೇಕೆಂಬ ಮಹಾದಾಸೆ ಹೊಂದಿ ಕೆ.ಎಲ್.ಇ. ಸಂಸ್ಥೆ ಸ್ಥಾಪನೆಗೆ ಕಾರಣರಾದ ಸಪ್ತರ್ಷಿಗಳಲ್ಲೊಬ್ಬರಾಗಿ ಬೆಳಗಾಂವ್ ಲಿಂಗರಾಜ ಕಾಲೇಜು, ಧಾರವಾಡದ ಆರ್.ಎಲ್.ಎಲ್. ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದರು ಎಂದರು.

ಶಿ. ಶಿ. ಬಸವನಾಳ ಓದಿದ್ದು ಇತಿಹಾಸ ಹಾಗೂ ಅರ್ಥಶಾಸ್ತ್ರವಾದರೂ ಕನ್ನಡದ ಪ್ರಖಾಂಡ ಪಂಡಿತರಾಗಿದ್ದರು. ವಚನ ಸಾಹಿತ್ಯ ಕ್ಷೇತ್ರಕ್ಕೂ ಅವರ ಕೊಡುಗೆ ಅಪಾರ. ವೀರಶೈವ ಸಾಹಿತ್ಯಕ್ಕೂ ಸಂಬಂಧಿಸಿದ ಕೃತಿ ರಚಿಸಿದ್ದಾರೆ. ಸಮರ್ಥ ಸಂಪಾದಕರಾಗಿ, ಸಂಶೋಧಕರಾಗಿ ಅನುಪಮ ಸೇವೆಗೈದಿದ್ದಾರೆ. ಬಹುಭಾಷಾ ವಿಶಾರದರಾದ ಅವರು ಪಡೆದದ್ದಕ್ಕಿಂತ ಸಮಾಜಕ್ಕಾಗಿ ನೀಡಿದ್ದೇ ಜಾಸ್ತಿ ಎಂದು ಹೇಳಿದರು.

ದತ್ತಿದಾನಿಗಳಾದ ರವೀಂದ್ರ ಶಿ. ಬಸವನಾಳ ದತ್ತಿ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮೃತ್ಯುಂಜಯ ಕಾಲೇಜಿನ ಪ್ರಾಚಾರ್ಯ ಡಾ. ನೀಲಕ್ಕ ಪಾಟೀಲ ಮಾತನಾಡಿ, ಪ್ರೊ. ಶಿ.ಶಿ. ಬಸವನಾಳ ಅವರದ್ದು ಘನವಾದ ಬದುಕು. ಅವರ ಬದುಕಿನ ಅವಧಿ ಕಡಿಮೆಯಾದರೂ ಸಾಧಿಸಿದ ಸಾಧನೆ ದೊಡ್ಡದು. ಅವರು ಬಹುಮುಖ ವ್ಯಕ್ತಿತ್ವದ ವಿಭಿನ್ನ ನೆಲೆಯ ಸಾಧಕರು ಎಂದು ಸ್ಮರಿಸಿದರು.

ಪ್ರೊ. ಶಿ.ಶಿ. ಬಸವನಾಳ 132 ಜನ್ಮದಿನದ ಪ್ರಯುಕ್ತ ಆರ್.ಎಲ್.ಎಸ್. ಆವರಣದಲ್ಲಿರುವ ಪ್ರೊ. ಶಿ.ಶಿ. ಬಸವನಾಳ ಮತ್ತು ಶಿರಸಂಗಿ ಲಿಂಗರಾಜ ದೇಸಾಯಿಯವರ ಪುತ್ಥಳಿಗೆ ಸಂಘದಿಂದ ಮಾಲಾರ್ಪಣೆ ಮಾಡಿ ಸಲ್ಲಿಸಲಾಯಿತು. ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಅಶೋಕ ಚಿಕ್ಕೋಡಿ, ಶಂಕರಲಿಂಗ ಶಿವಳ್ಳಿ, ಡಾ. ಮೃತ್ಯುಂಜಯ ಶೆಟ್ಟರ, ಆರ್.ಬಿ. ಬನಪ್ಪನವರ, ಶರಣಪ್ಪ ಬಂಡ್ಯಾಳ, ಡಾ. ಮೊನೊಲಿಸಾ ಅಕ್ಕಿಹಾಳ, ಸಿ.ವ್ಹಿ.ಕಣಬರ್ಗಿ, ಹರಿಹರ, ಮಾಧುರಿ ಚಿಕ್ಕೋಡಿ ಸೇರಿದಂತೆ ಶಿ.ಶಿ. ಬಸವನಾಳ, ಚಿಕ್ಕೋಡಿ ಕುಟುಂಬದವರು ಇದ್ದರು.

ಸುಶ್ಮೀತಾ ಪ್ರಾರ್ಥಿಸಿದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರೆಹಮಾನ ಗೊರಜನಾಳ ಪರಿಚಯಿಸಿದರು. ಡಾ. ಬಾಬು ಬೆಣ್ಣಿ ವಂದಿಸಿದರು.

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್