ಕನ್ನಡಪ್ರಭ ವಾರ್ತೆ ಕಲಬುರಗಿ
ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಏಳಿಗೆ ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರೊ. ವಾಘಮಾರೆ ಶಿವಾಜಿ ಅವರ ಸೇವೆ ಸ್ಮರಣೀಯ. ವಿದ್ಯಾರ್ಥಿಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಮತ್ತು ಕಾಳಜಿ ವಹಿಸಿದ್ದರು. ಗುರುವಿನ ತಾಳ್ಮೆ ಮತ್ತು ಅಧ್ಯಯನ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.ಗುವಿವಿ ವಾಣಿಜ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಸಭಾಭವನದಲ್ಲಿ ಪ್ರಾಧ್ಯಾಪಕ ಪ್ರೊ. ವಾಘ್ಮೋರೆ ಶಿವಾಜಿ ಅವರ ಸೇವಾ ನಿವೃತ್ತಿ ಅಂಗವಾಗಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ವಾಣಿಜ್ಯ ಅಧ್ಯಯನ ಕೇಂದ್ರದಲ್ಲಿ ಸುಧೀರ್ಘ 36 ವರ್ಷ 6 ತಿಂಗಳು ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕ ಪ್ರೊ. ವಾಘಮಾರೆ ಶಿವಾಜಿ ಸೇವೆ ಅವಿಸ್ಮರಣೀಯ ಎಂದರು.
ಪ್ರೊ. ವಾಘ್ಮೋರೆ ಶಿವಾಜಿ ಮಾತನಾಡಿ, ವಿದ್ಯಾರ್ಥಿಗಳ ಬದುಕನ್ನು ರೂಪಿಸಲು ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಆದರಿಂದಲೇ ವಿಶ್ವವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪ್ರೀತಿ ಗಳಿಸಲು ಸಾಧ್ಯವಾಯಿತು ಎಂದು ಸೇವಾ ಅವಧಿಯಲ್ಲಿನ ಕೆಲವು ಅವಿಸ್ಮರಣೀಯ ಸಂಗತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ರಾಜನಾಳ್ಕರ್ ಲಕ್ಷ್ಮಣ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಾಣಿಜ್ಯ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎ.ಪಿ. ಹೊಸಮನಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ಸಿ.ಎಸ್ ಬಸವರಾಜ, ಡಾ. ಬಿ.ಎಂ ಕನಹಳ್ಳಿ, ಡಾ. ಬಿ.ವಿಜಯಾ ಮತ್ತು ವಾಘಮಾರೆ ಶಿವಾಜಿಯವರ ಧರ್ಮಪತ್ನಿ ಲತಾ ವಾಘಮಾರೆ ಹಾಗೂ ಕುಟುಂಬದ ಸದಸ್ಯರು, ವಿಭಾಗದ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕು. ಶ್ರದ್ಧಾ ಪುರಾಣಿಕ ಮತ್ತು ಅಪರ್ಣ ಅತಿಥಿಗಳನ್ನು ಪರಿಚಯಿಸಿದರು. ಸಂತೋಷಕುಮಾರ ಹಂಗನಕಟ್ಟಿ ವಂದಿಸಿದರು. ನಿಜಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.