ಸಾಧನೆಗೆ ಮಾತೃಭಾಷೆಯ ಪರಿಪಕ್ವತೆ ಅವಶ್ಯ: ನ್ಯಾಯಮೂರ್ತಿ ಎಚ್.ಪಿ. ಸಂದೇಶ್

KannadaprabhaNewsNetwork |  
Published : Nov 02, 2025, 02:30 AM IST
ಪೋಟೋ: 01ಎಸ್‌ಎಂಜಕೆಪಿ01ಶಿವಮೊಗ್ಗದ ಸಿ.ಭೀಮಸೇನರಾವ್ ಕಾನೂನು ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಅನುಸಂಧಾನ ಸ್ಪರ್ಧೆಯ ಸಮಾರೋಪದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅಭಿನಂದಿಸಲಾಯಿತು.  | Kannada Prabha

ಸಾರಾಂಶ

ಬದುಕಿನ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಲು ಮಾತೃಭಾಷೆಯ ಕಲಿಕೆಯಲ್ಲಿ ಪರಿಪಕ್ವತೆ ಅತ್ಯವಶ್ಯಕ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬದುಕಿನ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಲು ಮಾತೃಭಾಷೆಯ ಕಲಿಕೆಯಲ್ಲಿ ಪರಿಪಕ್ವತೆ ಅತ್ಯವಶ್ಯಕ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅಭಿಪ್ರಾಯಪಟ್ಟರು.

ನಗರದ ಸಿ.ಭೀಮಸೇನರಾವ್ ಕಾನೂನು ಕಾಲೇಜಿನಲ್ಲಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿ.ಭೀಮಸೇನರಾವ್ ಕಾನೂನು ಕಾಲೇಜು, ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕಾನೂನು ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಅನುಸಂಧಾನ ಸ್ಪರ್ಧೆಯ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿ, ಮಾತೃಭಾಷೆ ಎಂಬುದು ಅಭಿವ್ಯಕ್ತಿಯ ಅದ್ಭುತ ಸಾಧನ. ರಾಜ್ಯೋತ್ಸವದ ಆಚರಣೆಯ ಜೊತೆಗೆ ಭಾಷೆಯನ್ನು ಬೆಳೆಸಿ, ಸದಾ ಪ್ರಸ್ತುತವಾಗಿಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅರಿತುಕೊಳ್ಳಿ. ಮಾತೃಭಾಷೆಯಲ್ಲಿ ಸಾಧಿಸದವನು ಇತರೆ ಯಾವ ಭಾಷೆಯಲ್ಲಿಯೂ ಸಾಧಿಸಲಾರ. ಕನ್ನಡದ ಅಸ್ಮಿತೆ ಉಳಿಸಿಕೊಳ್ಳುವಲ್ಲಿ ಕುವೆಂಪು ಅವರ ಕೊಡುಗೆ ಅಪಾರ ಎಂದರು.

ಮಾನವ ಸಂಬಂಧದಲ್ಲಿ ಅನುಸಂಧಾನ ಅತಿ ಮುಖ್ಯ. ವಿವಾದಗಳನ್ನು ಶಾಂತ ರೂಪವಾಗಿ ಬಗೆಹರಿಸುವ ಕಲೆ ವಕೀಲ ವೃತ್ತಿಯಲ್ಲಿ ಅತ್ಯವಶ್ಯಕ. ಅನುಸಂಧಾನದಿಂದ ಇಬ್ಬರು ಕಕ್ಷಿದಾರರಲ್ಲಿಯು, ಮನಸ್ಸಿಗೆ ನೆಮ್ಮದಿ ಸಿಗುವಂತಹ ಸಂದರ್ಭ ರೂಪಿಸಿ, ಹಣಕ್ಕಿಂತ, ಜನರ ವಿಶ್ವಾಸ ನಂಬಿಕೆ ಗಳಿಸುವತ್ತ ಕೇಂದ್ರಿಕರಿಸಿ. ವಕೀಲರು ಸಮಾಜವನ್ನು ಉತ್ತಮದೆಡೆಗೆ ಪರಿವರ್ತಿಸಬಲ್ಲ ಶಕ್ತಿ ಹೊಂದಿದ್ದಾರೆ‌ ಎಂದರು.

ನಿರ್ಗತಿಕರಿಗೆ, ಬಡವರಿಗೆ, ಸಮಾಜದ ಅಭಿವೃದ್ಧಿಗೆ ನಿಮ್ಮ ಬುದ್ದಿವಂತಿಕೆಯನ್ನು ಪಸರಿಸುವ ಕಾರ್ಯಮಾಡಿ, ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಿ. ಜಾತಿ, ಲಂಚ ಮತ್ತು ಅಪರಾಧಗಳು ದೇಶವನ್ನು ಬಾಧಿಸುತ್ತಿದೆ. ದೇಶದ ಹಿತಾಸಕ್ತಿಗಿಂತ ವೈಯುಕ್ತಿಕ ಹಿತಾಸಕ್ತಿಗಳು ಜಾಸ್ತಿಯಾಗುತ್ತಿದೆ. ಆಷಾಢಭೂತಿಗಳು ಜಾಸ್ತಿಯಾಗುತ್ತಿದ್ದು, ಮೌಲ್ಯಗಳು ಕಣ್ಮರೆಯಾಗುತ್ತಿರುವ ಆತಂಕದಲ್ಲಿದ್ದೇವೆ ಎಂದು ಹೇಳಿದರು.

ಮೊಬೈಲ್ ಎಂಬ ವ್ಯಾಮೋಹ ಮಾನವ ಸಂಪನ್ಮೂಲವನ್ನು ಹಾಳು ಮಾಡುತ್ತಿದೆ‌. ತಂತ್ರಾಂಶಕ್ಕಿಂತ ಪುಸ್ತಕಗಳನ್ನು ಅಧ್ಯಯನ ಮಾಡುವಲ್ಲಿ ಆಸಕ್ತಿ ವಹಿಸಿ. ಶಿಸ್ತು, ಶ್ರಮ, ಸಮಯ ಪ್ರಜ್ಞೆ, ಆತ್ಮವಿಶ್ವಾಸ, ಚೈತನ್ಯ, ನಿರ್ಭಯತೆ ಜೀವನದ ಸಾರವಾಗಿ ಅಳವಡಿಸಿಕೊಳ್ಳಿ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಅನುಸಂಧಾನದಲ್ಲಿ ಪ್ರಾಮಾಣಿಕತೆ ಮತ್ತು ಸಮಗ್ರತೆ ಎಂಬುದು ಅತ್ಯಮೂಲ್ಯ. ವೃತ್ತಿ ಧರ್ಮದಲ್ಲಿ ಪ್ರಾಮಾಣಿಕತೆ ಉಳಿಸಿಕೊಂಡಾಗ ಮಾತ್ರ, ಸವಾಲುಗಳನ್ನು ಎದುರಿಸುವ ಸ್ಥೈರ್ಯ ದೊರಕಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ, ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಎಂ.ಎಸ್.ಅನಂತದತ್ತ, ಗೋವಾದ ಸಲಗಾಂವ್ಕರ್ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಾಬು ಗೌಡ ಪಾಟೀಲ್, ಕಾರ್ಯಕ್ರಮ ಸಂಯೋಜಕರಾದ ಸೌಮ್ಯ.ಹೆಚ್.ಎ, ಮೇಘಾ ವಿಜಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜು ಪ್ರಥಮ

ರಾಜ್ಯಮಟ್ಟದ ಅನುಸಂಧಾನ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ತಂಡ ಪ್ರಥಮ ಬಹುಮಾನ ಪಡೆದರು. ಬೆಳಗಾವಿಯ ಬಿ.ವಿ.ಬೆಲ್ಲದ್ ಕಾನೂನು ಕಾಲೇಜಿನ ತಂಡ ದ್ವಿತೀಯ ಬಹುಮಾನ ಪಡೆದರು. ಉಡುಪಿಯ ವೈಕುಂಠ ಬಾಳೆಗಾರ್ ಕಾನೂನು ಕಾಲೇಜು ಸಮಾಧಾನಕರ ಬಹುಮಾನ ಪಡೆದರು. ರಾಜ್ಯದ ವಿವಿಧ ಕಾನೂನು ಕಾಲೇಜುಗಳ 20 ತಂಡಗಳು ಭಾಗವಹಿಸಿದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ