ದೊಡ್ಡಬಳ್ಳಾಪುರ: ಬೆಲೆ ಹೆಚ್ಚಾಗಿದೆ ಎನ್ನುವ ಒಂದೇ ಕಾರಣಕ್ಕೆ ಇಡೀ ತೋಟದಲ್ಲಿ ಅಡಿಕೆ ಸಸಿಗಳನ್ನು ಮಾತ್ರ ಬೆಳೆಸದೆ ಎಲ್ಲಾ ರೀತಿಯ ಬೆಳೆಗಳು ಇರುವಂತೆ ಮಿಶ್ರ ಪದ್ದತಿಯ ಕೃಷಿಗೆ ರೈತರು ಪ್ರಥಮ ಆದ್ಯತೆ ನೀಡಿದರೆ ಆರ್ಥಿಕ ನಷ್ಟಕ್ಕೆ ಒಳಗಾಗುವುದು ತಪ್ಪಲಿದೆ ಎಂದು ಸಾವಯವ ತೋಟಗಾರಿಕ ಕೃಷಿ ತಜ್ಞ ಶಿವನಾಪುರ ರಮೇಶ್ ಹೇಳಿದರು. ಅವರು ತಾಲೂಕಿನ ಮಧುರನಹೊಸಹಳ್ಳಿ ಸಮೀಪದ ತಬರನ ತೋಟದಲ್ಲಿ ನಡೆದ ಹಿರಿಯ ರೈತ ಚೇತನ ದಿವಂಗತ ಡಾ.ಎನ್.ವೆಂಕಟರೆಡ್ಡಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ‘ತೋಟಗಾರಿಕೆ ಬೆಳೆಗಳ ನಿರ್ವಹಣೆ’ ಕುರಿತು ಮಾತನಾಡಿದರು. ರೈತರು ನಮ್ಮ ಸುತ್ತ ಮುತ್ತಲಿನ ಮಾರುಕಟ್ಟೆಯಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತಿವೆ ಎನ್ನುವುದನ್ನು ಗಮನಿಸುವ ಮೂಲಕ ದೀರ್ಘಕಾಲಿನ ತೋಟಗಾರಿಕಾ ಬೆಳೆಗಳನ್ನು ಬೆಳೆಯಬೇಕೆ ವಿನಹ, ತಕ್ಷಣದ ಬೆಲೆ ಏರಿಕೆಯನ್ನು ಮಾತ್ರ ಗಮನಿಸಿ ಅಲ್ಲ. ಮಾವು, ಅಡಿಕೆ, ತೆಂಗಿನ ತೋಟಗಳು ಒಂದು ವರ್ಷ ಮಳೆ ಕೊರತೆಯಾದರು. ಒಣಗಿ ಹೋಗುವುದು, ಇಳುವರಿ ಕುಸಿತವಾಗಲು ಉಳುಮೆಗೆ ಬೃಹತ್ ಗಾತ್ರದ ಟ್ರ್ಯಾಕ್ಟರ್ಗಳ ಬಳಕೆಯೇ ಕಾರಣವಾಗಿದೆ. ತೋಟಗಳ ಒಳಗೆ ಉಳುಮೆ ಮಾಡುವುವಾಗ ಮಿನಿ ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಬೇಕು. ಇದರಿಂದ ಮಣ್ಣು ಸಡಿಲವಾಗಿಯೇ ಉಳಿದು ಮಳೆ ನೀರು ಭೂಮಿಯಲ್ಲಿ ಇಂಗಲು ಸಹಕಾರಿಯಾಗಲಿದೆ ಎಂದರು. ಮಾವು ಬೆಳೆಗಾರರು ತಮ್ಮ ಪ್ರದೇಶದಲ್ಲಿನ ವಾತಾವರಣಕ್ಕೆ ಯಾವ ರೀತಿಯ ತಳಿಗಳು ಸೂಕ್ತ ಎನ್ನುವುದನ್ನು ಅರಿತುಕೊಂಡು ನಾಟಿಮಾಡಬೇಕು. ಸಾಕಷ್ಟು ಜನ ರೈತರು ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದೆ ಎನ್ನುವ ಒಂದೇ ಕಾರಣಕ್ಕೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದ ತಳಿಗಳನ್ನು ನಾಟಿ ಮಾಡಿದ್ದಾರೆ. ಇದರಿಂದ ಹಣ್ಣುಗಳ ರುಚಿ ಇಲ್ಲದೆ ಮಾರುಕಟ್ಟೆಯಲ್ಲಿ ಸಹಜವಾಗಿಯೇ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ. ಹಾಗೆಯೇ ಇಳುವರಿಯಲ್ಲೂ ದೊಡ್ಡ ಪ್ರಮಾಣದ ಕುಸಿತವಾಗಿ ನಷ್ಟ ಅನುಭವಿಸುವಂತಾಗಿದೆ. ಈ ಭಾಗದಲ್ಲಿ ಅಮರಾಫಲ್ಲಿ, ದೇಶರಾ, ಮಲ್ಲಿಕಾ, ನೀಲಂ ತಳಿಗಳು ಉತ್ತಮ ಇಳುವರಿ ಜೊತೆಗೆ ಹಣ್ಣುಗಳು ರುಚಿಯಾಗಿಯೂ ಇರಲಿವೆ ಎಂದರು. ಟಾಮೋಟೋ ಬದಲಿಗೆ ಹುಣಿಸೆ ಹಣ್ಣನ್ನು ಬಳಸುವಂತೆ ವೈದ್ಯರೇ ಶಿಫಾರಸ್ಸು ಮಾಡುವ ದಿನಗಳು ಬರಲಿದೆ. ಮನುಷ್ಯ ಆರೋಗ್ಯವಾಗಿರಬೇಕಾದರೆ ಆಯಾ ಪ್ರದೇಶದಲ್ಲಿ ಬೆಳೆಯುವ ಧಾನ್ಯಗಳಿಂದ ತಯಾರಿಸುವ ಪ್ರಾಂತೀಯ ಆಹಾರ ಸೇವನೆಗೆ ಪ್ರಥಮ ಆದ್ಯತೆ ನೀಡಬೇಕಿದೆ. ಈ ಬಗ್ಗೆ ತಿಳಿವಳಿಕೆಯ ಕೊರತೆ ಇದೆ. ಮಾರುಕಟ್ಟೆಯಲ್ಲಿ ದೊರೆಯುವ ಏಕ ರೀತಿಯ ಆಹಾರ ಕ್ರಮಗಳಿಂದಾಗಿಯೇ ಇಂದು ಅತಿ ಹೆಚ್ಚಿನ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತಿವೆ ಎಂದರು. ರಾಜ್ಯ ರೈತ ಸಂಘದ ಮುಖಂಡರಾದ ಕೆ.ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿ, ಬಯಲು ಸೀಮೆಯ ರೈತರಿಗೆ ಹೇಗಾದರೂ ಮಾಡಿ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಅವಿರತವಾಗಿ ಶ್ರಮಿಸಿದ್ದವರು ಡಾ.ವೆಂಕಟರೆಡ್ಡಿ. ಹಾಗಾಗಿಯೇ ನೀರಾವರಿ ತಜ್ಞ ಡಾ.ಪರಮಶೀವಯ್ಯ ಅವರನ್ನು ಹತ್ತಾರು ಬಾರಿ ತಾಲೂಕಿಗೆ ಕರೆಸಿ ಶಾಶ್ವತ ನೀರಾವರಿ ಯೋಜನೆ ಬಗ್ಗೆ ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಪ್ರಯತ್ನ ನಡೆಸಿದ್ದರು. ಆದರೆ ಅಂತಿಮವಾಗಿ ವಿವಿಧ ಕಾರಣಗಳಿಗಾಗಿ ಎತ್ತಿನಹೊಳೆ ಕುಡಿಯುವ ನೀರಾವರಿ ಯೋಜನೆ ಜಾರಿಗೆ ಬಂತು. ಈಗ ಈ ಯೋಜನೆಯ ಕಾಮಗಾರಿಯು ಸಹ ನಿಗದಿತ ಅವಧಿಯಲ್ಲಿ ಪೂರ್ಣವಾಗದೇ ಬಯಲು ಸೀಮೆ ರೈತರು ನೀರಿನ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲೇ ಎತ್ತಿನಹೊಳೆ ಯೋಜನೆಯ ನೀರಿನ ಪೈಪ್ ಲೈನ್ ಹಾದು ಹೋಗುತ್ತಿವೆ. ಆದರೆ ಇಲ್ಲಿನ ಎಷ್ಟು ಕೆರೆಗಳಿಗೆ ನೀರು ತುಂಬಿಸಲಿವೆ. ಯಾವ ಕೆರೆಗಳು ಎನ್ನುವ ಯಾವುದೇ ಮಾಹಿತಿಯು ರೈತರಿಗೆ ಇಲ್ಲ. ನಮ್ಮ ಭೂಮಿ ಕಳೆದುಕೊಂಡು ಪೈಪ್‌ಲೈನ್‌ಗಳನ್ನು ಹಾಕಲು ಅವಕಾಶ ನೀಡಿ ನಮಗೇ ನೀರು ಇಲ್ಲದಂತೆ ಈಗಲೇ ಎಚ್ಚೆತ್ತುಕೊಂಡು ಹೆಚ್ಚಿನ ಕೆರೆಗಳಿಗೆ ನೀರಿನ ಸೌಲಭ್ಯ ದೊರೆಯುವಂತೆ ಮಾಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ವಾಣಿಜ್ಯ ಪದವಿಯಲ್ಲಿ ರ್ಯಾಂಕ್ ಪಡೆದಿರುವ ರಾಜ್ಯ ರೈತ ಸಂಘದ ಮುಖಂಡ ನಾರಾಯಣಸ್ವಾಮಿ ಅವರ ಪುತ್ರಿ ನಿವೇದಿತಾ ಅವರನ್ನು ಅಭಿನಂದಿಸಲಾಯಿತು. ಕನ್ನಡ ಪಕ್ಷದ ಹಿರಿಯ ಮುಖಂಡ ಸಂಜೀವನಾಯಕ್, ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಹನುಮೇಗೌಡ ಇತರರಿದ್ದರು. 22ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ಹಾದ್ರಿಪುರ ಬಳಿಯ ತಬರನ ತೋಟದಲ್ಲಿ ರೈತನಾಯಕ ಡಾ.ಎನ್.ವೆಂಕಟರೆಡ್ಡಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.