ಚಂದ್ರಗುತ್ತಿ ದೇಗುಲ ಪ್ರಗತಿಯಾದಲ್ಲಿ ಗ್ರಾಮ ಅಭಿವೃದ್ಧಿ ಸಾಧ್ಯ

KannadaprabhaNewsNetwork | Published : Oct 23, 2023 12:16 AM

ಸಾರಾಂಶ

ದಸರಾ ಉತ್ಸವವು ಸರ್ವ ಭಕ್ತಾದಿಗಳ ಸಹಕಾರದಿಂದ ಒಗ್ಗಟ್ಟಿನಿಂದ ಆಚರಣೆ ಮಾಡುತ್ತಿರುವುದು ಸಂಭ್ರಮ ತಂದಿದೆ

ಕನ್ನಡಪ್ರಭ ವಾರ್ತೆ ಸೊರಬ

ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿರುವ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾ ದೇವಸ್ಥಾನ ಅಭಿವೃದ್ಧಿಯಾದರೆ ಗ್ರಾಮವೂ ಅಭಿವೃದ್ಧಿಯ ಪಥದೆಡೆಗೆ ಸಾಗುತ್ತದೆ. ಈ ನಿಟ್ಟಿನಲ್ಲಿ ಸಚಿವ ಮಧು ಬಂಗಾರಪ್ಪ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾ ಸಭಾ ಭವನದಲ್ಲಿ ಶ್ರೀ ರೇಣುಕಾಂಬಾದೇವಿ ದಸರಾ ಉತ್ಸವ ಆಚರಣಾ ಸಮಿತಿ, ಹಮ್ಮಿಕೊಂಡಿದ್ದ 6ನೇ ದಿನದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಪ್ರವಾಸೋದ್ಯಮ ಇಲಾಖೆಯ ಅನುದಾನಗಳನ್ನು ವಿನಿಯೋಗ ಮಾಡಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮುಖ್ಯವಾಗಿದೆ. ದೇವಸ್ಥಾನವನ್ನು ಅಭಿವೃದ್ದಿ ಪಡಿಸಿದಲ್ಲಿ ಚಂದ್ರಗುತ್ತಿ ಗ್ರಾಮದಲ್ಲಿನ ಸಣ್ಣ ಪುಟ್ಟ ಅಂಗಡಿ, ಹೋಟೆಲ್ ಮಾಲೀಕರು ದೊಡ್ಡ ಪ್ರಮಾಣದ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಇದರಿಂದ ಗ್ರಾಮವು ಸಹ ಅಭಿವೃದ್ದಿಯಾಗುತ್ತದೆ ಎಂದು ತಿಳಿಸಿದರು.ದಸರಾ ಉತ್ಸವವು ಸರ್ವ ಭಕ್ತಾದಿಗಳ ಸಹಕಾರದಿಂದ ಒಗ್ಗಟ್ಟಿನಿಂದ ಆಚರಣೆ ಮಾಡುತ್ತಿರುವುದು ಸಂಭ್ರಮ ತಂದಿದೆ ಎಂದ ಅವರು, ಮನುಷ್ಯನ ಜೀವನದಲ್ಲಿ ಕಷ್ಟಗಳು ಸಹಜ. ಆದರೆ ಭಕ್ತಿ ಎಂಬುದು ಮನುಷ್ಯನಲ್ಲಿ ಇರಬೇಕು. ಮೂಢನಂಬಿಕೆಗಳಿಗೆ ಆಸ್ಪದ ಕೊಡಬಾರದು. ನಂಬಿದರೆ ಭಗವಂತನನ್ನು ನಂಬಬೇಕು ಎಂದರು.

ಅನಂತರ ಶ್ರೀ ರೇಣುಕಾಂಬ ಹವ್ಯಾಸಿ ಬಯಲಾಟ ಕಲಾ ಮಂಡಳಿ ವತಿಯಿಂದ ವಿದ್ಯುನ್ಮತಿ ಕಲ್ಯಾಣ ಅರ್ಥಾತ್ ಕಾಲ ಜಂಗನವಧೆ ಎಂಬ ಬಯಲಾಟ ಪ್ರದರ್ಶನವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ ವಹಿಸಿದ್ದರು. ಮಾಜಿ ಜಿಪಂ ಸದಸ್ಯ ತಬಲಿ ಬಂಗಾರಪ್ಪ ಮಾತನಾಡಿದರು. ಅಯ್ಯಪ್ಪಸ್ವಾಮಿ ಮಂಜಣ್ಣ ಗದ್ದೆಮನೆ, ಪ್ರಗತಿಪರ ಕೃಷಿಕ ಶಣ್ಮುಖಪ್ಪ, ಸಾಗರ ನಗರಸಭೆ ವಿರೋಧ ಪಕ್ಷದ ನಾಯಕರು ಗಣಪತಿ ಮಂಡಗಳಲೆ, ಸಾಗರ ಮಾಜಿ ಎಪಿಎಂಸಿ ಅಧ್ಯಕ್ಷ ಚೇತನ್‌ರಾಜ್ ಕಣ್ಣೂರು, ಸಾಗರ ಮಾಜಿ ತಾಪಂ ಸದಸ್ಯ ಸೋಮಶೇಖರ್ ಲಾವಳಗೆರೆ ಸೇರಿದಂತೆ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

- - - -21ಕೆಪಿಸೊರಬ01:

ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾದೇವಿ ದಸರಾ ಉತ್ಸವ ಆಚರಣೆಯ 6ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಿದರು.

Share this article