ಕನ್ನಡಪ್ರಭ ವಾರ್ತೆ ಮೂಡುಬಿದಿರೆಯಾವುದೇ ಉದ್ಯಮದಲ್ಲಿ ಯಶಸ್ಸು ಗಳಿಸುವುದಕ್ಕಿಂತಲೂ ಪ್ರಗತಿ ಹೊಂದುವುದು ಮುಖ್ಯ, ಸೋಲು ಕಂಡ ವ್ಯಕ್ತಿ ಗೆಲ್ಲುವ ಗುಟ್ಟನ್ನು ಚೆನ್ನಾಗಿ ಕಲಿಸಬಲ್ಲ ಎಂದು ದೈಜಿವರ್ಲ್ಡ್ ವಾಹಿನಿಯ ಸ್ಥಾಪಕ ಹಾಗೂ ಮುಖ್ಯ ಸಂಪಾದಕ ವಾಲ್ಟರ್ ನಂದಳಿಕೆ ಹೇಳಿದ್ದಾರೆ.ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ‘ಟ್ರೈಬ್ಲೇಜ್’ ವಿದ್ಯಾರ್ಥಿ ವೇದಿಕೆ ವತಿಯಿಂದ ಹಮ್ಮಿಕೊಂಡ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್ ಸಂಸ್ಥೆ ಮುಖಾಂತರ ಕಂಡುಕೊಂಡ ಉದ್ಯಮಶೀಲತೆಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಅವರು ಮಾತನಾಡಿದರು.ಉದ್ಯಮಿಗಳಾಗಲು ಆಶಯ ಹೊಂದಿರುವ ವಿದ್ಯಾರ್ಥಿಗಳು ಶಿಕ್ಷಣದ ಪ್ರಮಾಣ ಪತ್ರಗಳ ಜತೆಗೆ ಆತ್ಮವಿಶ್ವಾಸದೊಂದಿಗೆ ಸಂವಹನ ನಡೆಸುವುದನ್ನೂ ಬೆಳೆಸಿಕೊಳ್ಳಬೇಕು. ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯ ವಿಧಾನ ಇಲ್ಲ, ಹೊಸ ವಿಷಯಗಳನ್ನು ತಿಳಿದುಕೊಂಡು ಆಯಾ ಕಾಲದ ಪ್ರವೃತ್ತಿಗಳಿಗೆ ಅನುಗುಣವಾಗಿ ನವೀಕರಿಸಿಕ್ಕೊಳ್ಳುವುದು ಯಶಸ್ವಿ ಉದ್ಯಮಕ್ಕೆ ಬಹಳ ಅಗತ್ಯ. ಅವಮಾನಗಳಿಗೆ ಹಿಂಜರಿಯದೆ ಉತ್ಸಾಹವಿರುವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹಾಗೂ ಉತ್ತಮ ಜೀವನ ಶೈಲಿಗೆ ಬದಲಾವಣೆಯಾಗಲು ಆರಂಭಿಕ ಹಂತದಲ್ಲಿ ಸ್ವಲ್ಪ ಕಷ್ಟವೆನಿಸಿದರೂ ಅಪ್ಡೇಟ್, ಅಪ್‌ಗ್ರೇಡ್ ಹಾಗೂ ಅಪ್ಲಿಫ್ಟ್ ಎನ್ನುವ ರೂಢಿಯನ್ನು ಪ್ರತಿಯೊಬ್ಬರೂ ಕಂಡುಕೊಳ್ಳಿ ಎಂದರು.ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿಯಾಗಬಹುದು, ಯಶಸ್ವಿ ವ್ಯಕ್ತಿಯನ್ನು ಅನುಸರಿಸುವುದರಿಂದ ಜೀವನಕ್ಕೆ ಪರಿಣಾಮಕಾರಿಯಾದ ಪ್ರೇರಣೆ ದೊರಕುತ್ತದೆ. ಬದುಕಿನಲ್ಲಿ ಸವಾಲುಗಳನ್ನು ಎದುರಿಸಿದಾಗ ಮಾತ್ರ ಹೊಸ ಕಲಿಕೆಯ ಆರಂಭವಾಗುತ್ತದೆ. ಹೊಸ ಪ್ರಯತ್ನದ ದಾರಿಯಲ್ಲಿ ಹಲವಾರು ಟೀಕೆಗಳು ಎದುರಾದರೂ ಯಶಸ್ಸು ದೊರೆತಾಗ ಸಹಜವಾಗಿಯೇ ಸಮಾಜ ಒಪ್ಪಿಕೊಳ್ಳುತ್ತದೆ ಎಂದರು.ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಿಭಾಗ ಮುಖ್ಯಸ್ಥೆ ಸುರೇಖಾ, ಟ್ರೈಬ್ಲೇಜ್ ವಿದ್ಯಾರ್ಥಿ ವೇದಿಕೆ ಮಾರ್ಗದರ್ಶಕಿ ಸೋನಿ, ವಿದ್ಯಾರ್ಥಿ ಸಂಯೋಜಕರಾದ ಆದರ್ಶ್ ಶೆಟ್ಟಿ, ಭೂಮಿಕಾ ಉಪಸ್ಥಿತರಿದ್ದರು. ದೀಪಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಖುಷಿ ಶೆಟ್ಟಿ ಸ್ವಾಗತಿಸಿ, ಸಮೃದ್ಧಿ ಪ್ರಭು ವಂದಿಸಿದರು.