ಸಂಡೂರು: ವ್ಯಕ್ತಿಗಳ ಜೀವನದಲ್ಲಿ ಗುರಿ ಹಾಗೂ ಗುರು ಇದ್ದಲ್ಲಿ ಪ್ರಗತಿ ಸಾಧ್ಯ. ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ಖಾಸಗಿ ಶಿಕ್ಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್ ತಿಳಿಸಿದರು.
ಜಗಳೂರಿನ ನಿವೃತ್ತ ಉಪನ್ಯಾಸಕ ಜಿ.ಎಸ್. ಸುಭಾಷ್ ಚಂದ್ರಬೋಸ್ ಅವರು ಉಪನ್ಯಾಸ ನೀಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡುತ್ತಿವೆ. ಹೆಚ್ಚಿನ ಫಲಿತಾಂಶವನ್ನು ನೀಡುವಲ್ಲಿಯೂ ಖಾಸಗಿ ಶಾಲಾ ಕಾಲೇಜುಗಳ ಪಾತ್ರ ಪ್ರಮುಖವಾಗಿದೆ. ಮಕ್ಕಳ ಭವಿಷ್ಯ ಶಿಕ್ಷಕರ ಕೈಯ್ಯಲ್ಲಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಅಗತ್ಯವಾಗಿದೆ ಎಂದರು.
ರೋಟರಿ ಟ್ರಸ್ಟ್‌ನ ಅಧ್ಯಕ್ಷೆ ರೂಪಾ ಯು. ಲಾಡ್ ಉತ್ತಮ ಶಿಕ್ಷಣದಿಂದ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಶಿಸ್ತು, ಸಮಯ ಪಾಲನೆ, ಪರಸ್ಪರ ಸಹಕಾರ, ಗುರು ಹಿರಿಯರಿಗೆ ಗೌರವ ತೋರುವುದು ಮುಂತಾದ ಗುಣಗಳನ್ನು ಬೆಳೆಸುವುದು ಅಗತ್ಯವಾಗಿದೆ. ಶಿಕ್ಷಕರು ಜ್ಯೋತಿಯಂತೆ ಉತ್ತಮ ಶಿಕ್ಷಣದ ಮೂಲಕ ಹಲವಾರು ವಿದ್ಯಾರ್ಥಿಗಳ ಜೀವನವನ್ನು ಬೆಳಗುತ್ತಾರೆ. ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಅಧ್ಯಕ್ಷ ಕೆ.ಕುಮಾರಸ್ವಾಮಿ ಮಾತನಾಡಿ, ಸುಮಾರು 30 ವರ್ಷಗಳಿಂದ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿಲ್ಲ. ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕೆನ್ನುವ ಬೇಡಿಕೆ ಹಾಗೆಯೇ ಇದೆ. ಖಾಸಗಿ ಶಾಲೆಗಳೂ ಶಿಕ್ಷಕರ ಕಲ್ಯಾಣ ನಿಧಿಗೆ ಹಣವನ್ನು ತುಂಬಿದರೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ಈ ನಿಧಿಯಿಂದ ಯಾವುದೇ ಸಹಾಯಧನ ದೊರೆಯುತ್ತಿಲ್ಲ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ನೀಲಕಂಠಾಚಾರಿ ಕಮ್ಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಶಿಕ್ಷಕಿ ವರ್ಷಾ ಜಿ. ಪಟೇಲ್ ವಾಚಿಸಿದರು. ಹನುಮೇಶ್ ಪ್ರಾರ್ಥಿಸಿದರು. ಎಂ.ಡಿ. ರಮೇಶ್ ಸ್ವಾಗತಿಸಿದರು. ಪರಶುರಾಮ್ ನಿರೂಪಿಸಿದರು. ಹುಲುಗಪ್ಪ ವಂದಿಸಿದರು.
ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಂ. ಮಹಾಂತೇಶ್, ಖಜಾಂಚಿ ನಾಗರಾಜ, ಖಾಸಗಿ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಫಿರೋಜ್, ಹಾಲಿ ಪದಾಧಿಕಾರಿಗಳು, ವಿವಿಧ ಶಿಕ್ಷಕರ ಸಂಘಗಳ ಮುಖಂಡರಾದ ಚೌಕಳಿ ಪರಶುರಾಮಪ್ಪ, ಪ್ರೇಮಾ, ಷಣ್ಮುಖರಾವ್, ಬಿ.ಎಂ. ಶಶಿಧರ, ಜೆಸಿಐ ವಲಯ ಅಧಿಕಾರಿ ಲಿಂಗರಾಜ್, ವಿವಿಧ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಪ್ರಶಸ್ತಿ ಪುರಸ್ಕೃತರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.