ಕನ್ನಡಪ್ರಭ ವಾರ್ತೆ ಚನ್ನಗಿರಿ
ಇಲ್ಲಿನ ತೋಟ ಉತ್ಫನ್ನಗಳ ಮಾರಾಟ ಸಹಕಾರ ಸಂಘ (ತುಮ್‌ಕೋಸ್) ಸಂಸ್ಥೆಯು ಮಧ್ಯಕರ್ನಾಟಕ ಭಾಗವಾದ ಚನ್ನಗಿರಿಯಲ್ಲಿ ಕಳೆದ 40 ವರ್ಷಗಳಿಂದ ತೋಟಬೆಳೆಗಾರ ರೈತರಿಗೆ ಸ್ಫಂದನೆಯನ್ನು ನೀಡುತ್ತಿದ್ದು ರೈತರು ಸಹ ಸಹಕಾರ ನೀಡುತ್ತಿರುವುದರಿಂದ ತುಮ್‌ಕೋಸ್ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪ್ರಗತಿದಾಯಕವಾಗಿ ನಡೆಯುತ್ತಿದೆ ಎಂದು ತುಮ್‌ಕೋಸ್ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಹೇಳಿದರು.ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಸೋಮವಾರ ತುಮ್‌ಕೋಸ್ ಸಂಸ್ಥೆಯ 41ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಕಳೆದ 40ವರ್ಷಗಳಲ್ಲಿ ಸಂಘವು ಸಾಕಷ್ಟು ಏಳು-ಬೀಳುಗಳನ್ನು ಕಂಡು ತನ್ನದೆ ಆದಂತಹ ವ್ಯವಹಾರವನ್ನು ವಿಸ್ತರಿಸಿಕೊಂಡು ಅಭಿವೃದ್ದಿಯ ಪಥದತ್ತ ಸಾಗುತ್ತಿದ್ದು ಪ್ರಸ್ತುತ ವರ್ಷದಲ್ಲಿ 13.06.55.831 ಕೋಟಿ ರು. ಲಾಭಾಂಶವನ್ನು ಪಡೆದಿದೆ ಎಂದರು.
ಸಂಘದ ಸದಸ್ಯರಿಗೆ ವಿಮಾ ಸೌಲಭ್ಯಗಳನ್ನು ಮಾಡಿಸಲು ಯೋಜನೆ ರೂಪಿಸಿದ್ದು ಪ್ರತಿಸದಸ್ಯರು 1 ಲಕ್ಷ ರು. ಹಣವನ್ನು ಪಾವತಿ ಮಾಡಿದರೆ 5 ಲಕ್ಷ ರು. ವರೆಗೂ ಉಚಿತ ವೈದ್ಯಕೀಯ ಸೇವೆಯನ್ನು ನೀಡಲು ಸಬಂಧ ಪಟ್ಟ ವಿಮಾ ಕಂಪನಿಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಅಡಕೆ ಬೆಳೆಗಾರ ರೈತರಿಗೆ ಪ್ರತಿ ಒಂದು ಎಕ್ಕರೆಗೆ 2.40 ಲಕ್ಷ ರು. ಸಾಲ ಸೌಲಭ್ಯ ನೀಡಲಿದ್ದು ಇದರಲ್ಲಿ 15 ಪರ್ಸೆಂಟ್ ಹಣವನ್ನು ಸೂಪರ್ ಮಾರ್ಕೆಟ್‌ನಲ್ಲಿ ದಿನಸಿ ವಸ್ತುಗಳ ಖರೀದಿಗೆ ಮತ್ತು ತೋಟಗಾರಿಕಾ ಪರಿಕರಗಳಿಗೆ 15 ಪರ್ಸೆಂಟ್ ಹಣವನ್ನು ವಿಂಗಡಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಸಾಲ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಈ ವಾರ್ಷಿಕ ಸಭೆಯಲ್ಲಿ ಸಂಘದ ಸದಸ್ಯರು ಸಂಘದ ಬೆಳವಣಿಗೆಯ ಬಗ್ಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಆಧ್ಯಕ್ಷರು ಸಮರ್ಪಕವಾಗಿ ಉತ್ತರಿಸಿದರು.ಸಂಘದ ವ್ಯವಸ್ಥಾಪಕ ನಿರ್ದೇಶಕ ಮಧು ಮಾಹಿತಿ ನೀಡುತ್ತ, ಸಂಘವು ಇತರೆ ಸಂಸ್ಥೆಗಳಲ್ಲಿ ತೊಡಗಿಸಿರುವ ವಿನಿಯೋಗಗಳು, ಠೇವಣಿಗಳು, ಹಣಕಾಸು ಸಂಸ್ಥೆಗಳಿಂದ ಪಡೆದ ವಿವಿಧ ಸಾಲಗಳು, ಸದಸ್ಯರಿಗೆ ನೀಡಿದ ಸಾಲದ ವಿವರಗಳು, ಆಸ್ತಿಗಳು ವ್ಯಾಪಾರ ವಹಿವಾಟುಗಳ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಮಾಹಿತಿ ನೀಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನಿಧನ ಹೊಂದಿದ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಆಕ್ಕಳಿಕಟ್ಟೆ ಗಂಗಾದರಪ್ಪ, ಹರೋನಹಳ್ಳಿ ವಿಜಯ್ ಕುಮಾರ್, ತಿಪ್ಪಗೊಂಡನಹಳ್ಳಿ ಟಿ.ವಿ.ರಾಜು, ಹೊದಿಗೆರೆ ಹೆಚ್.ಎಸ್.ಮಂಜುನಾಥ್, ಮೇಳನಾಯ್ಕನಕಟ್ಟೆ ಎಂ.ಮಂಜುನಾಥ್, ಪಾಂಡೋಮಟ್ಟಿ ಪ್ರಭುಲಿಂಗಪ್ಪ, ಹಲಕನಹಾಳ್ ಜಿ.ಆರ್.ಶಿವಕುಮಾರ್, ಬಿಲ್ಲಹಳ್ಳಿ ಬಿ.ಎಸ್.ಬಸವರಾಜ್, ನಾರಶೆಟ್ಟಿಹಳ್ಳಿ ವೀನಾಕ್ಷಿ, ಲಿಂಗದಹಳ್ಳಿ ಎಲ್.ವಿ.ಶೋಭ, ಭೈರನಹಳ್ಳಿ ಬಿ.ಚನ್ನಬಸಪ್ಪ, ಕಗತೂರು ಕೆ.ಜಿ.ಓಂಕಾರಮೂರ್ತಿ, ಚನ್ನೇಶಪುರ ಲೋಕೇಶ್ವರ, ಮಾದೇನಹಳ್ಳಿ ಎಸ್.ರಘು, ಸಿಬ್ಬಂದಿ ಹಾಜರಿದ್ದರು.