ನೆಲ್ಲೂರು ಕೆರೆಗೆ ನೀರು ಕಾರ್ಯ ಸಾಕಾರ: ಗ್ರಾಮಸ್ಥರ ಹರ್ಷ

KannadaprabhaNewsNetwork |  
Published : Aug 14, 2026, 01:45 AM IST
ತಾಲೂಕಿನ ಪ್ಯಾಟಿ ಗ್ರಾಮದ ಕಣವಿ ಕೆರೆಗೆ ಬೇಟಿ ನೀಡಿದ ತಾಪಂ ಇಒ | Kannada Prabha

ಸಾರಾಂಶ

ಇಒ ಮುತುವರ್ಜಿ ವಹಿಸಿದ ಪರಿಣಾಮ ತಾಪಂ ಅನುದಾನದಲ್ಲಿ ಕೆರೆಯ ದಡದಿಂದ ೫೦೦ ಮೀಟರ್ ವರೆಗೂ ಪೈಪ್‌ಲೈನ್ ಜತೆಗೆ ಅದರ ಮೇಲೆ ರಸ್ತೆ ನಿರ್ಮಾಣ ಮಾಡಿ ರೈತರಿಗೆ ಓಡಾಡಲು ಅನುಕೂಲ ಮಾಡಿಕೊಡಲಾಗಿದೆ.

ಗಜೇಂದ್ರಗಡ: ತಾಲೂಕಿನ ಪ್ಯಾಟಿ ಗ್ರಾಮದ ಕಣವಿ ಕೆರೆಯಿಂದ ನೆಲ್ಲೂರು ಕೆರೆಗೆ ತಾಪಂ ಅನುದಾನದಲ್ಲಿ ಅಂದಾಜು ₹೯ ಲಕ್ಷ ಪೈಪ್‌ಲೈನ್ ಕಾಮಗಾರಿ ಕೈಗೊಂಡಿದ್ದು, ನೆಲ್ಲೂರು ಕೆರೆಗೆ ನೀರು ಹರಿಸುವ ಮೂಲಕ ನೆಲ್ಲೂರು ಪ್ಯಾಟಿ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇಕೆಯಾಗಿದ್ದು, ಈ ಭಾಗದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಪ್ಯಾಟಿ ಕಣವಿ ಕೆರೆಗೆ ಕೃಷ್ಣಾ ಬಿ ಸ್ಕಿಂನ ಕೆರೆ ತುಂಬಿಸುವ ಯೋಜನೆ ಮೂಲಕ ನೀರು ಬಿಟ್ಟಿದ್ದರಿಂದ ಕೆರೆ ಕೋಡಿ ತುಂಬಿದ ಮೇಲೆ ನೀರು ಅಲ್ಲಲ್ಲಿ ಹರಿದು ಹಳ್ಳಕ್ಕೆ ಹೋಗುತ್ತಿತ್ತು. ನೆಲ್ಲೂರು ಗ್ರಾಮದ ೪೮ ಎಕರೆ ಕೆರೆಗೆ ಸಣ್ಣ ಪೈಪ್ ಅಳವಡಿಕೆ ಮಾಡಿರುವುದರಿಂದ ಕೆರೆ ತುಂಬವುದು ಅಸಾಧ್ಯವಾಗಿತ್ತು. ಪ್ಯಾಟಿ ಕೆರೆ ಸಣ್ಣದು ಮತ್ತು ದೊಡ್ಡ ಪೈಪ್ ಅಳವಡಿಕೆ ಮಾಡಿರುವುದರಿಂದ ಕೆರೆ ಬೇಗನೆ ತುಂಬಿ ಕೋಡಿ ಬಿದ್ದು, ಹಳ್ಳಕ್ಕೆ ಹರಿಯುತ್ತಿತ್ತು.

ಹೀಗಾಗಿ ಹಳ್ಳಕ್ಕೆ ಹರಿಯುವ ನೀರನ್ನು ಗ್ರಾಮಸ್ಥರು ನೆಲ್ಲೂರು ಕೆರೆಗೆ ಬಿಡಿಸುವುದು ದೊಡ್ಡ ಬೇಡಿಕೆಯಾಗಿತ್ತು. ಅಲ್ಲದೆ ರೈತರು ಓಡಾಡುವ ದಾರಿಯ ಮೂಲಕವೇ ಕೆರೆ ನೀರು ಹರಿದು ಹೋಗುತ್ತಿರುವುದರಿಂದ ನಿತ್ಯ ಓಡಾಡುವ ಈ ಭಾಗದ ರೈತರಿಗೆ ತುಂಬಾ ತೊಂದರೆಯಾಗಿತ್ತು. ಗ್ರಾಮದಲ್ಲಿ ರೈತರು ಹಾಗೂ ಗ್ರಾಮಸ್ಥರು ಅನುಭವಿಸುತ್ತಿದ್ದ ಸಮಸ್ಯೆ ಪರಿಹಾರಕ್ಕೆ ಶಾಸಕರಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇಒ ಮುತುವರ್ಜಿ ವಹಿಸಿದ ಪರಿಣಾಮ ತಾಪಂ ಅನುದಾನದಲ್ಲಿ ಕೆರೆಯ ದಡೆಯಿಂದ ೫೦೦ ಮೀಟರ್ ವರೆಗೂ ಪೈಪ್‌ಲೈನ್ ಜತೆಗೆ ಅದರ ಮೇಲೆ ರಸ್ತೆ ನಿರ್ಮಾಣ ಮಾಡಿ ರೈತರಿಗೆ ಓಡಾಡಲು ಅನುಕೂಲ ಮಾಡಿಕೊಡಲಾಗಿದೆ.

ಅಲ್ಲದೆ ಕೃಷ್ಣಾ ಬಿ ಸ್ಕಿಂ ಮೂಲಕ ಕೆರೆಗೆ ನೀರು ತುಂಬಿಸುವುದರಿಂದ ಪ್ಯಾಟಿ, ನೆಲ್ಲೂರು, ಮುಶಿಗೇರಿ, ಕಲ್ಲಿಗನೂರು, ಚಿಕ್ಕಳಗುಂಡಿ, ಶಾಂತಗೇರಿ, ರಂಗಾಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿದೆ.

ತಾಪಂ ಇಒ ಭೇಟಿ: ತಾಲೂಕಿನ ಪ್ಯಾಟಿ ಗ್ರಾಮದ ಕಣವಿ ಕೆರೆಗೆ ತಾಪಂ ಇಒ ಚಂದ್ರಶೇಖರ ಕಂದಕೂರು ಭೇಟಿ ನೀಡಿ ಕೆರೆ ವೀಕ್ಷಿಸಿದರು. ನಂತರ ತಾಪಂ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿ ಮೂಲಕ ಪೈಪ್‌ಲೈನ್ ಮೂಲಕ ನೀರು ಹರಿದು ಹೋಗುತ್ತಿರುವುದನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಮಾಲಗಿತ್ತಿ, ವೀರನಗೌಡ ಗೌಡ್ರ, ಫಕ್ಕೀರಗೌಡ ಗೌಡ್ರ, ಶಾಂತಪ್ಪ ಮುದೇನಗುಡಿ, ಹೊನ್ನಕೇರಪ್ಪ ಮುದೇನಗುಡಿ, ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

ಅನುಕೂಲ: ಪ್ಯಾಟಿ ಗ್ರಾಮದ ಕಣವಿ ಕೆರೆಯಿಂದ ನೆಲ್ಲೂರು ಕೆರೆಗೆ ನೀರು ಹರಿಸಲು ತಾಲೂಕು ಪಂಚಾಯಿತಿ ಅನುದಾನದಲ್ಲಿ ಸಿಮೆಂಟ್ ಪೈಪ್‌ಲೈನ್ ಅಳವಡಿಸಿ ಅದರ ಮೇಲೆ ರೈತರಿಗೆ ಓಡಾಡಲು ದಾರಿ ಮಾಡಿಕೊಟ್ಟಿರುವುದು ಬಹಳಷ್ಟು ಅನುಕೂಲವಾಗಿದೆ. ಪ್ಯಾಟಿ ಮತ್ತು ನೆಲ್ಲೂರು ಕೆರೆ ತುಂಬಿದರೆ ಅಂದಾಜು ೬೦೦ ಬೋರ್‌ವೆಲ್ ರಿಚಾರ್ಜ್ ಆಗುತ್ತವೆ ಎಂದು ಗ್ರಾಪಂ ಮಾಜಿ ಸದಸ್ಯ ಚಂದ್ರಶೇಖರ ಮುದೇಗುಡಿ ತಿಳಿಸಿದರು.

ದಾರಿ ಸಮಸ್ಯೆ: ಪ್ಯಾಟಿ ಗ್ರಾಮದ ಕಣವಿ ಕೆರೆ ತುಂಬಿ ಕೋಡಿ ನೀರನ್ನು ನೆಲ್ಲೂರು ಕೆರೆಗೆ ಹರಿಸಲು ಮತ್ತು ಅಲ್ಲಿಯ ರೈತರಿಗೆ ಸೂಕ್ತ ಜಮೀನುಗಳಿಗೆ ಓಡಾಡಲು ದಾರಿ ಸಮಸ್ಯೆಯಾಗಿತ್ತು. ಇದನ್ನು ಗ್ರಾಮಸ್ಥರು ಶಾಸಕರು ಮತ್ತು ನನ್ನ ಗಮನಕ್ಕೆ ತಂದರು. ತಾಪಂ ಅನುದಾನದಲ್ಲಿ ೩೦೦ ಮೀಟರ್ ಸಿಮೆಂಟ್ ಪೈಪ್‌ಲೈನ್ ಅಳವಡಿಸಿ, ಅದರ ಮೇಲೆ ರೈತರಿಗೆ ಓಡಾಡಲು ಸೂಕ್ತ ದಾರಿ ಮಾಡಿಕೊಡಲಾಗಿದೆ ಎಂದು ತಾಪಂ ಇಒ ಚಂದ್ರಶೇಖರ ಬಿ. ಕಂದಕೂರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುಟುಕುಗಳಿದೆ ಅದ್ಭುತ ಸಂದೇಶ ಶಕ್ತಿ: ಡಾ. ಅನ್ನದಾನೀಶ್ವರ ಶ್ರೀ
ಎಸ್.ಎಸ್. ಪಾಟೀಲ ಶರಣ ಪಥದ ಹಿರಿಯ ಜೀವಿ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ