7800 ಎಕರೆಗೆ ನೀರು ಒದಗಿಸುವ ಯೋಜನೆ ಜಾರಿ: ಶಾಸಕ ಮಂಜುನಾಥ್‌

KannadaprabhaNewsNetwork | Published : Mar 24, 2025 12:31 AM

ಸಾರಾಂಶ

ಕೊಳ್ಳೇಗಾಲ ತಾಲೂಕಿನ ಹನೂರು ಕ್ಷೇತ್ರದ ರೈತರ ಕಲ್ಯಾಣಕ್ಕಾಗಿ ಕಬಿನಿ ಬಲದಂಡೆ ನಾಲೆ ವ್ಯಾಪ್ತಿಯ ತೆಳ್ಳನೂರು ಶಾಖಾ ನಾಲೆಯ 7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರು ಹರಿಸುವ ಕಾರ್ಯವನ್ನು ಅನುಷ್ಠಾನಗೊಳಿಸುವಲ್ಲಿ ಕಾಯ ವಾಚಾ ಮನಸ ಪ್ರಯತ್ನಿಸುತ್ತೇನೆ. ಇದರಿಂದ ರೈತರಿಗೆ ಸಮರ್ಪಕ ರೀತಿಯಲ್ಲಿ ಅನುಕೂಲವಾಗಲಿದೆ ಎಂಬುದನ್ನು ಮನಗಂಡಿರುವೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲ ತಾಲೂಕಿನ ಹನೂರು ಕ್ಷೇತ್ರದ ರೈತರ ಕಲ್ಯಾಣಕ್ಕಾಗಿ ಕಬಿನಿ ಬಲದಂಡೆ ನಾಲೆ ವ್ಯಾಪ್ತಿಯ ತೆಳ್ಳನೂರು ಶಾಖಾ ನಾಲೆಯ 7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರು ಹರಿಸುವ ಕಾರ್ಯವನ್ನು ಅನುಷ್ಠಾನಗೊಳಿಸುವಲ್ಲಿ ಕಾಯ ವಾಚಾ ಮನಸ ಪ್ರಯತ್ನಿಸುತ್ತೇನೆ. ಇದರಿಂದ ರೈತರಿಗೆ ಸಮರ್ಪಕ ರೀತಿಯಲ್ಲಿ ಅನುಕೂಲವಾಗಲಿದೆ ಎಂಬುದನ್ನು ಮನಗಂಡಿರುವೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ಅವರು ತಾಲೂಕಿನ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಾಲಯ ಆವರಣದಲ್ಲಿ ರೈತರು, ಕಬಿನಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೆಳ್ಳನೂರು ಶಾಖಾ ನಾಲೆಗೆ ನೀರು ಒದಗಿಸುವ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿ, ಚಿಕ್ಕಲ್ಲೂರು ಹಾಗೂ ತೆಳ್ಳನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಉತ್ತಮ ಕೖಷಿ ಭೂಮಿ ಇದೆ. ವ್ಯವಸಾಯಕ್ಕೆ ಯೋಗ್ಯವೂ ಆಗಿದೆ. ಸಮರ್ಪಕ ನೀರು ಹಾಗೂ ವಿದ್ಯುತ್ ಒದಗಿಸಿದರೆ ರೈತರಿಗೆ ಅನುಕೂಲವಾಗಿದೆ. ಈ ಎರಡು ಪಂಚಾಯಿತಿ ವತಿಯಿಂದ 3 ಸಾವಿರಕ್ಕೂ ಅಧಿಕ ರೈತಾಪಿ ವರ್ಗ ಜನರು ಬೆಂಗಳೂರು ಇನ್ನಿತರ ಕಡೆ ಕೆಲಸಕ್ಕಾಗಿ ಗುಳೆ ತೆರಳಿದ್ದಾರೆ. ಈ ಹಿನ್ನೆಲೆ ಕೃಷಿಗೆ ಪೂರಕವಾಗಿ ನೀರಾವರಿ ವ್ಯವಸ್ಥೆ ಜಾರಿಗೊಳಿಸಿದರೆ ಗುಳೆ ಹೋದವರು ಹಿಂದಿರುಗಿ ಜೀವನವನ್ನು ಕಟ್ಟಿಕೊಳ್ಳುತ್ತಾರೆ, ಇದನ್ನು ನಾನು ಮನಗಂಡಿರುವೆ ಎಂದರು.

ತೆಳ್ಳನೂರು ಶಾಖಾ ನಾಲೆಯ ನಂಬಿ ಬದುಕುತ್ತಿರುವ ರೈತರಿಗೆ ಸಂಪೂರ್ಣವಾಗಿ ಕಾಲುವೆ ನೀರಿನ ಸೌಲಭ್ಯ ತಲುಪಿಲ್ಲ. ಏಕೆಂದರೆ ಕೆಲವು ಲೋಪದೋಷಗಳಿಂದ ಸಮಸ್ಯೆ ಉಂಟಾಗಿದೆ. ಇದನ್ನು ಪರಿಹರಿಸಿಕೊಂಡು ಈ ಭಾಗದ ರೈತರ ಹಿತಕಾಯಬೇಕೆಂಬ ಉದ್ದೇಶದಡಿ ರೈತರ ಸಭೆ ಕರೆದಿದ್ದೇವೆ. ಈ ಯೋಜನೆ ಅನುಷ್ಠಾನಗೊಂಡರೆ ಕೃಷಿಗೆ ಅನುಕೂಲವಾಗಲಿದೆ ಎಂದರು.

7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವ ಈ ಯೋಜನೆ ಜಾರಿ ಕಾರ್ಯ ತ್ವರಿತವಾಗಿ ಆಗಲಿದ್ದು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ರೈತರು ಪರಿಹಾರ ಪಡೆಯುವ ನಿಟ್ಟಿನಲ್ಲಿ ಸೂಕ್ತ ದಾಖಲೆಗಳನ್ನು ನೀಡಿ ಸ್ಪಂದಿಸಬೇಕು. ೩೫೭ ಫಲಾನುಭವಿಗಳ ದಾಖಲಾತಿಗಳ ಅಗತ್ಯವಿದ್ದು, ಇದೀಗ 97 ಫಲಾನುಭವಿಗಳ ದಾಖಲೆಗಳನ್ನು ಕಲೆ ಹಾಕಲಾಗಿದೆ. ಉಳಿದವರು ಸಹ ದಾಖಲೆ ನೀಡಿದರೆ ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದರು

ಈ ವೇಳೆ ಕಬಿನಿ ಕಾರ್ಯಪಾಲಕ ಅಭಿಯಂತರ ಈರಣ್ಣ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಗಡಿ, ಕೊತ್ತನೂರು ಪಿಡಿಒ ಶಿವಕುಮಾರ್, ತೆಳ್ಳನೂರು ಪಿಡಿಒ ಶೋಭಾ ರಾಣಿ, ಸದಸ್ಯರಾದ ಚಿಕ್ಕದೊಡ್ಡಯ್ಯ, ಅರುಣೇಶ, ರವಿ ಇನ್ನಿತರಿದ್ದರು

Share this article