ಶಿಗ್ಗಾಂವಿ: ತೀರಾ ಹಿಂದುಳಿದ ಸಮಾಜ ಬೇಡ ಜಂಗಮ ನಮ್ಮದಾಗಿದೆ. ಸರಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ಮುಂದೆ ಬರಬೇಕು. ಸಮಾಜದಲ್ಲಿ ಮುಂದೆ ಬಂದ ವ್ಯಕ್ತಿಗಳು ಸಮಾಜದ ಬೆಂಬಲಕ್ಕೆ ನಿಂತಾಗ ಇನ್ನುಳಿದ ಸಮಾಜದವರೂ ಮುಂದೆ ಬರಲು ಸಾಧ್ಯವಿದೆ ಎಂದು ಹಾವೇರಿ ನಗರಸಭೆ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ಶಿಗ್ಗಾಂವಿ ತಾಲೂಕು ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಾಲೂಕಿನಲ್ಲಿ ಜಂಗಮ ಸಮಾಜಕ್ಕೆ ನೂತನ ಸಭಾಭವನಕ್ಕೆ ನಿವೇಶನ ಕೊಡಿಸಲು ಸರಕಾರದ ಮಟ್ಟದಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಅಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರು. ಡಿಪಾಜಿಟ್ ಸಂಘಕ್ಕೆ ನೀಡುವ ಭರವಸೆ ನೀಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿ ಮಾತನಾಡಿ, ಜಾತಿ ಸಂಘಟನೆಗಳು ಆಗಲಿ. ಆದರೆ ಅವುಗಳು ನೀತಿಯನ್ನು ಮರೆಯಬಾರದು, ರಾಜಕಾರಣದವರು ನಮ್ಮ ಜಂಗಮರ ದೊಡ್ಡತನ ದಡ್ಡತನಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅದು ಆಗಬಾರದು ಎಂದು ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು. ನಮ್ಮಲ್ಲಿ ಸಂಘಟನೆಯ ಕೊರತೆ ಇದೆ. ಎಲ್ಲ ಸಮಾಜಗಳ ಉದ್ದಾರವನ್ನು ನಮ್ಮ ಜಂಗಮ ಸಮುದಾಯ ಬಯಸುತ್ತದೆ ಎಂದರು.ಹಿರೇಮಣಕಟ್ಟಿ ಮುರುಗೇಂದ್ರ ಮಠದ ವಿಶ್ವಾರಾಧ್ಯಾ ಶಿವಾಚಾರ್ಯರು ಆಶೀರ್ವಚನ ನೀಡಿ ಮಾತನಾಡಿ, ಇಂದು ಜಂಗಮರಲ್ಲಿ ಇಚ್ಛಾಶಕ್ತಿ ಕಡಿಮೆಯಾಗುತ್ತಿದೆ. ಪಂಚಾಚಾರ್ಯರ ಗುಣಗಳ ಪಾಲಿಸುವಂತಹ ಜಂಗಮರಾಗಬೇಕು, ಕೇವಲ ಸಂಘಟನೆಯ ಜೊತೆಗೆ ಸೌಲಭ್ಯಗಳನ್ನು ಪಡೆದು, ಕೊಡಿಸುವಂತಹ ಸಂಘಟನೆಯಾಗಲಿ ಎಂದು ಹಾರೈಸಿದರು.
ನಿವೃತ್ತ ಉಪನ್ಯಾಸಕ ಎಲ್.ಎ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಜಂಗಮರು ದುಶ್ಚಟಗಳಿಂದ ದೂರ ಇರಬೇಕು, ನಮ್ಮನ್ನು ಅನುಕರಿಸುವ ಜನ ಇದೆ. ಹೀಗಾಗಿ ನಾವು ಮಕ್ಕಳನ್ನು ಸುಸಂಸ್ಕೃತರನ್ನಾಗಿಸಬೇಕಿದೆ, ನಮ್ಮಲ್ಲಿ ೮೦% ಜನ ಬಡ ಜಂಗಮರಿದ್ದೇವೆ, ಮುಂದಿನ ದಿನಗಳಲ್ಲಿ ವಧುವರರ ಸಮಾವೇಶ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಇದಕ್ಕೆ ಜಂಗಮರ ಸಹಕಾರ ಅವಶ್ಯ ಎಂದರು.ಡಾ. ಆರ್.ಎಸ್. ಅರಳೆಲೆಮಠ ಮಾತನಾಡಿ, ಜಂಗಮರಿಗೆ ಆರ್ಥಿಕ ಶಕ್ತಿ ಬೇಕಾದರೆ ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ, ಒಂದಾಗಿ ನಡೆಯಲು ಒಗ್ಗಟ್ಟಿನ ಅವಶ್ಯಕತೆ ಇದೆ. ನಮ್ಮ ಆಚಾರ ವಿಚಾರಗಳ ಸಂಸ್ಕಾರವನ್ನು ನಡೆಸಿಕೊಂಡು ಬರಬೇಕಿದೆ. ಬೋಧನೆ ಮಾಡುವವರು ಸಂಸ್ಕಾರವನ್ನು ಮರೆಯಬಾರದು ಎಂದರು.ಬಂಕಾಪುರ ಅರಳಲೇ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು, ಗಂಜಿಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು, ಹೋತನಹಳ್ಳಿ ಶಂಭುಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷ ಶಶಿಧರಸ್ವಾಮಿ ಸುರಗಿಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೂತನ ಜಂಗಮ ಸಮಾಜದ ಗೌರವಾಧ್ಯಕ್ಷ ಸಂಗಮೇಶ ಕಂಬಾಳಿಮಠ ಹಾಗೂ ನೂತನ ಅಧ್ಯಕ್ಷ ಶಶಿಧರಸ್ವಾಮಿ ಸುರಗಿಮಠ ಅವರನ್ನು ಸ್ಥಳೀಯ ಸಾಯಿ ಸೇವಾ ಸಮಿತಿ ಸೇರಿದಂತೆ ವಿವಿಧ ಸಮಾಜದ ಅದ್ಯಕ್ಷರುಗಳು ಸನ್ಮಾನಿಸಿದರು. ನಂತರ ಪದಗ್ರಹಣ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ವಿವಿಧ ಸಮಾಜದ ಅಧ್ಯಕ್ಷರುಗಳಾದ ಶಿವಾನಂದ ಬಾಗೂರ, ವೀರೇಶ ಆಜೂರ, ಶಿವಾನಂದ ಗಾಣಗೇರ, ವೀರೇಶ ಸೊಬರದ, ಪಕ್ಕೀರಪ್ಪ ಕುಂದೂರ, ರಾಘವೇಂದ್ರ ದೇಶಪಾಂಡೆ, ಕಾಳಪ್ಪ ಬಡಿಗೇರ, ಸುರೇಶ ಮುಳೆ, ಬಸನಗೌಡ ರಾಮನಗೌಡ್ರ, ಸುಧಾಕರ ದೈವಜ್ಞ, ಕರಿಯಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಹಡಪದ, ವಿಶ್ವನಾಥ ಕಂಬಾಳಿಮಠ, ಟಿ.ವಿ. ಸುರಗೀಮಠ, ಲಲಿತಾ ಹಿರೇಮಠ, ಸಂತೋಷ ಹಿರೇಮಠ, ವೀಣಾ ಹಿರೇಮಠ ನೀರಲಗಿಯ ಎಂ.ಎಸ್. ಪಾಟೀಲ, ವಿಶ್ವನಾಥ ಕಂಬಾಳಿಮಠ ಸೇರಿದಂತೆ ಪದಾಧಿಕಾರಿಗಳು ಜಂಗಮ ಸಮಾಜದ ಹಿರಿಯರು ಇದ್ದರು.