ಬಿಎಸ್‌ವೈ ಬಣ, ಕೇಂದ್ರದಲ್ಲಿ ಸಚಿವರಾಗದವರ ಬಣ, ಯತ್ನಾಳ ಬಣ, ಬಿಜೆಪಿಯಲ್ಲಿ ಮೂರು ಬಣ ಸೃಷ್ಟಿ : ಕೋನರಡ್ಡಿ ಲೇವಡಿ

KannadaprabhaNewsNetwork | Updated : Aug 13 2024, 01:08 PM IST

ಸಾರಾಂಶ

ಬಿಎಸ್‌ವೈ ಬಣ, ಕೇಂದ್ರದಲ್ಲಿ ಸಚಿವರಾಗದವರ ಬಣ, ಯತ್ನಾಳ ಬಣ... ಹೀಗೆ ಬಿಜೆಪಿ ಮೂರು ಭಾಗವಾಗಿ ಒಡೆದು ಹೋಗಿದೆ.

ಧಾರವಾಡ: ರಾಜ್ಯ ಬಿಜೆಪಿಯಲ್ಲಿ ಈಗ ಮೂರು ಬಣಗಳಾಗಿದ್ದು, ಒಂದು ಮೂಲತಃ ಬಿಜೆಪಿ, ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾದವರ ಬಿಜೆಪಿ. ಮತ್ತೊಂದು ಇಬ್ಬರೂ ಬೇಡ ಎನ್ನುವ ಬಿಜೆಪಿ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಲೇವಡಿ ಮಾಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಬಣ, ಕೇಂದ್ರದಲ್ಲಿ ಸಚಿವರಾಗದವರ ಬಣ, ಯತ್ನಾಳ ಬಣ... ಹೀಗೆ ಬಿಜೆಪಿ ಮೂರು ಭಾಗವಾಗಿ ಒಡೆದು ಹೋಗಿದೆ. ಉತ್ತರ ಕರ್ನಾಟಕದವರನ್ನು ಯಾರೂ ಕೇಳುತ್ತಿಲ್ಲ ಎಂಬುದು ಯತ್ನಾಳ ಹಾಗೂ ಮತ್ತಿತರರ ಆರೋಪವಾಗಿದೆ. ಇವರು ಕೇವಲ ಕಾಂಗ್ರೆಸ್‌ನವರ ವಿರುದ್ಧ ಹೋರಾಟ ಮಾಡುವುದಲ್ಲ, ನಮ್ಮಲ್ಲೇ ಹೆಗ್ಗಣ ಸತ್ತು ಬಿದ್ದಿವೆ ಎಂದು ಸ್ವಪಕ್ಷದ ಯತ್ನಾಳ ಅವರೇ ಹೇಳುತ್ತಿದ್ದಾರೆ. ಆ ಹೆಗ್ಗಣ ಯಾವವು ಎಂದು ಅವರೇ ಹೇಳಿ ಅವುಗಳ ವಿರುದ್ಧವೂ ಬಿಜೆಪಿಯವರು ಪ್ರತಿಭಟನೆ ಮಾಡಬೇಕು ಎಂದರು.

ಸಿದ್ದರಾಮಯ್ಯನವರು 15 ಬಾರಿ ಬಜೆಟ್ ಕೊಟ್ಟವರು. ಅಲ್ಲಿಯ ವರೆಗೆ ಎಲ್ಲಿಯಾದರೂ ಕಪ್ಪು ಚುಕ್ಕೆ ಇದೆಯಾ ಎಂದು ಪ್ರಶ್ನಿಸಿದ ಕೋನರಡ್ಡಿ, ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಆಗಿನ ರಾಜ್ಯಪಾಲರು ಸರ್ಕಾರ ವಜಾ ಮಾಡಿದ್ದರು. ಆಗ ಅವರು ನ್ಯಾಯಾಲಯಕ್ಕೆ ಹೋಗಿದ್ದರು. ಆಗ ಆಗಿರುವ ತೀರ್ಪು ಸಂವಿಧಾನಕ್ಕೆ ಬೈಬಲ್ ಇದ್ದಂತೆ. ಅದರ ಪ್ರಕಾರವೇ ನಾವೆಲ್ಲ ನಡೆದುಕೊಳ್ಳಬೇಕಾಗುತ್ತದೆ. ಆನಂತರದ ಕಾಲದಲ್ಲಿ ರಾಜ್ಯಪಾಲರು ಯಾವ ಮುಖ್ಯಮಂತ್ರಿಗೆ ನೋಟಿಸ್‌ ಕೊಟ್ಟಿಲ್ಲ. ಬಹುಮತ ಇದ್ದರೆ ಗ್ರಾಪಂ ಅಧ್ಯಕ್ಷನನ್ನೇ ಕೆಳಗೆ ಇಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ 136 ಸ್ಥಾನ ಗೆದ್ದು ಬಹುಮತ ಸಾಬೀತು ಮಾಡಿದ್ದೇವೆ. ಬಿಜೆಪಿಗೆ ಆಪರೇಶನ್ ಕಮಲ ಮಾಡಲು ಆಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ. ನಮ್ಮದು ಸುಭದ್ರ ಸರ್ಕಾರ ಎಂದರು.

ತುಂಗಭದ್ರಾ ಡ್ಯಾಮ್ ಚೈನ್ ಕಟ್ ಆಗಿದೆ. ಡ್ಯಾಮ್‌ಗಳ ಬಗ್ಗೆ ನಮಗೆ ಚಿಂತೆ ಶುರುವಾಗಿದೆ. ನೀರು ಹೋದರೆ ಹೇಗೆ ಎಂಬ ನೋವು ಕಾಡುತ್ತಿದೆ. ಆದರೆ, ಬಿಜೆಪಿಯವರು ಕೇವಲ ರಾಜಕಾರಣ ಮಾಡುತ್ತಿದ್ದಾರೆ. 24 ತಾಸು ರಾಜಕಾರಣ ಮಾಡುವುದಲ್ಲ. ಸರ್ಕಾರಕ್ಕೆ ವಿರೋಧ ಪಕ್ಷದವರು ಸಲಹೆ ಕೊಡಬೇಕು. ಅವರು ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡಲಿ ಎಂದು ಕೋನರಡ್ಡಿ ಹೇಳಿದರು.

Share this article