ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಶಾಸಕ ಗೋಪಾಲಕೃಷ್ಣ ಬೇಳೂರು

KannadaprabhaNewsNetwork |  
Published : Jul 09, 2024, 12:49 AM IST
ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು | Kannada Prabha

ಸಾರಾಂಶ

ಬೆಳೆವಿಮೆ ಬಗ್ಗೆ ರೈತರಿಗೆ ಮಾಹಿತಿ ನೀಡಿ, ಹೆಚ್ಚು ರೈತರು ವಿಮೆ ಮಾಡಿಸಿಕೊಳ್ಳುವಂತೆ ಪ್ರೇರೆಪಿಸಿ. ಮಣ್ಣು ಪರೀಕ್ಷೆ ಕಾಲಕಾಲಕ್ಕೆ ನಡೆಸಿ ಉತ್ತಮ ಫಸಲು ತೆಗೆಯಲು ನೆರವಾಗಿ

ಕನ್ನಡಪ್ರಭವಾರ್ತೆ ಸಾಗರ

ಮಳೆಗಾಲ ಪ್ರಾರಂಭವಾಗಿದ್ದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೆಚ್ಚು ಜಾಗೃತೆಯಿಂದ ಕೆಲಸ ಮಾಡುವಂತೆ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರಿಗೆ ಸಮರ್ಪಕವಾಗಿ ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಬೇಕು. ರೈತರು ನೆಮ್ಮದಿಯಿಂದ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ಬೇಕಾದ ಎಲ್ಲ ರೀತಿ ಸಹಕಾರ ನೀಡುವಂತೆ ಆದೇಶಿಸಿದರು.

ಬೆಳೆವಿಮೆ ಬಗ್ಗೆ ರೈತರಿಗೆ ಮಾಹಿತಿ ನೀಡಿ, ಹೆಚ್ಚು ರೈತರು ವಿಮೆ ಮಾಡಿಸಿಕೊಳ್ಳುವಂತೆ ಪ್ರೇರೆಪಿಸಿ. ಮಣ್ಣು ಪರೀಕ್ಷೆ ಕಾಲಕಾಲಕ್ಕೆ ನಡೆಸಿ ಉತ್ತಮ ಫಸಲು ತೆಗೆಯಲು ನೆರವಾಗಿ ಎಂದು ಸೂಚಿಸಿದ ಶಾಸಕರು, ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಹಿನ್ನೀರಿನ ಜನರಿಗೆ ದಿನದ ೨೪ ಗಂಟೆ ವಿದ್ಯುತ್ ಕೊಡುವುದು ನಮ್ಮ ಕರ್ತವ್ಯ. ಮಳೆಗಾಲದಲ್ಲಿ ಆ ಭಾಗದ ಜನರಿಗೆ ವಿದ್ಯುತ್ ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯವಾಗುತ್ತದೆ. ಹಾಗಾಗಿ ತುಮರಿ ಸೇರಿ ಶರಾವತಿ ಹಿನ್ನೀರು ಪ್ರದೇಶದ ಬಗ್ಗೆ ಹೆಚ್ಚು ಗಮನ ಹರಿಸಿ. ನಾವು ಬೆಳಕಿನಲ್ಲಿದ್ದು ಹಿನ್ನೀರಿನ ಜನರು ಕತ್ತಲಿನಲ್ಲಿರುವುದು ಎಂತಹ ನ್ಯಾಯ. ಅವರ ಸಮಸ್ಯೆಗೆ ಸ್ಪಂದಿಸಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಉಪವಿಭಾಗಾಧಿಕಾರಿ ಯತೀಶ್ ಆರ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್, ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್, ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ ಸುಜಾತ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಡೆಂಘೀ ಬಗ್ಗೆ ಜಾಗೃತೆ ವಹಿಸಿ:

ಇಡೀ ರಾಜ್ಯದಲ್ಲಿ ಡೆಂಘೀ ಜ್ವರ ಹೆಚ್ಚುತ್ತಿರುವ ಹಿನ್ನೆಲೆ ಕ್ಷೇತ್ರ ವ್ಯಾಪ್ತಿ ಆಸ್ಪತ್ರೆಗಳಲ್ಲಿ ವೈದ್ಯರು ರಜೆ ಹಾಕದೇ ಕೆಲಸ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಡೇಂಘೀವಿನಿಂದ ಈಗಾಗಲೆ ಓರ್ವ ನೌಕರರನ್ನು ನಾವು ಕಳೆದುಕೊಂಡಿದ್ದೇವೆ. ಮುಂದೆ ಅಂತಹ ಸಾವು-ನೋವು ನಮ್ಮ ತಾಲೂಕಿನಲ್ಲಿ ಆಗಬಾರದು. ಮೃತ ನೌಕರನ ಕುಟುಂಬಕ್ಕೆ ಕನಿಷ್ಟ ₹೫ ಲಕ್ಷ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಗಮನ ಹರಿಸಬೇಕು. ವೈದ್ಯರು ಕರ್ತವ್ಯಕ್ಕೆ ವಿಳಂಬವಾಗಿ ಹಾಜರಾಗುವುದು, ರಜೆ ಹಾಕುವುದು ಮಾಡಿದರೆ ಅಂಥವರಿಗೆ ನೋಟಿಸ್ ನೀಡಲು ಸಿವಿಲ್ ಸರ್ಜನ್‌ಗೆ ಸೂಚನೆ ನೀಡಿದರು.

ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿ ಪ್ರತಿ ತಿಂಗಳು ಆರೋಗ್ಯ ತಪಾಸಣೆ ನಡೆಸಬೇಕು. ವಿದ್ಯಾರ್ಥಿ ನಿಲಯಕ್ಕೆ ಬೇರೆಬೇರೆ ಊರುಗಳಿಂದ ಮಕ್ಕಳು ಬಂದಿರುತ್ತಾರೆ. ಅವರ ಆರೋಗ್ಯ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ. ಮಕ್ಕಳಿಗೆ ಶುದ್ಧವಾದ ಮತ್ತು ಗುಣಮಟ್ಟದ ಆಹಾರ ನೀಡಬೇಕು. ಎಲ್ಲೆಲ್ಲಿ ಸೋಲಾರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೋ ಅಂತಹ ಕಡೆಗಳಲ್ಲಿ ಗೀಸರ್ ಅಳವಡಿಸಿ ಬಿಸಿನೀರಿನ ಸೌಲಭ್ಯ ಕೊಡಿ. ಹಾಸ್ಟೆಲ್‌ಗಳಿಂದ ಶಾಲಾಕಾಲೇಜುಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವ ಜೊತೆಗೆ ಗಾರ್ಮೆಂಟ್ಸ್‌ನಿಂದ ಪ್ರತಿದಿನ ಸಂಜೆ ಕಾರ್ಮಿಕರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪ್ರದಾಯ ತಿರಸ್ಕರಿಸದಿದ್ರೆ ಪ್ರಗತಿಶೀಲತೆ ಪ್ರಬಲವಾಗದು
ಸೋಮಾರಿಗಳಾಗದೆ ಕ್ರಿಯಾಶೀಲರಾಗಲಿ