ಕನ್ನಡಪ್ರಭ ವಾರ್ತೆ ಬೆಳಗಾವಿ
ಸಂಪ್ರದಾಯವಾದವನ್ನು ತಿರಸ್ಕರಿಸದಿದ್ದರೆ ಪ್ರಗತಿಶೀಲತೆ ಪ್ರಬಲವಾಗುವುದಿಲ್ಲ ಎಂದು ನಾಟಕಕಾರ ಡಾ.ಡಿ.ಎಸ್.ಚೌಗಲೆ ಹೇಳಿದರು.ಶುಕ್ರವಾರ ನಗರದ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ, ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕ ಆಯೋಜಿಸಿದ್ದ ಬಂಡಾಯ ಸಾಹಿತ್ಯ: ಹೊಸ ತಲೆಮಾರು ಅಭಿಯಾನದ ಅಂಗವಾಗಿ ಸಂಘಟಿಸಲಾಗುವ ರಾಜ್ಯ ಮಟ್ಟದ ವಿಚಾರ ಸಂಕಿರಣದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಸಾಮಾಜಿಕ ಜವಾಬ್ದಾರಿಯಿಂದ ಬರೆಯುವವರು ಕ್ಲಿಷ್ಟಕರ ಗಂಡಾಂತರಗಳನ್ನು ಎದುರಿಸಲೇಬೇಕಾಗುತ್ತದೆ. ಇದು ಸಾಹಿತಿ ಕಲಾವಿದರ ಆತ್ಮಸಾಕ್ಷಿ ಪ್ರಕ್ರಿಯೆಯಾಗಿದೆ ಎಂದರು.
ರಂಗಕರ್ಮಿ ರವಿ ಕೋಟಾರಗಸ್ತಿ ಮಾತನಾಡಿ, ಪ್ರಗತಿಪರತೆಯನ್ನು ಬರಹದಲ್ಲಿ ಮಾತ್ರ ಅಭಿವ್ಯಕ್ತಿಸುವುದಲ್ಲ, ಅದನ್ನು ಬದುಕಿನ ಭಾಗವಾಗಿ ಅನುಸರಿಸಬೇಕು. ಬದುಕು ಆದರ್ಶಮಯವಾಗಿರಬೇಕು ಎನ್ನುವುದು ನಮ್ಮ ಅದ್ಯತೆಯಾಗಿರಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಸಾಹಿತ್ಯ ಚಳುವಳಿಯ ಸೃಷ್ಟಿ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಹೊಸತಲೆಮಾರಿಗೆ ಗಟ್ಟಿಯಾದ ಸೈದ್ಧಾಂತಿಕ ಬದ್ಧತೆಯನ್ನು ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳ ಮೂಲಕ ಕಳೆದ 46 ವರ್ಷಗಳಿಂದ ಬಂಡಾಯ ಸಾಹಿತ್ಯ ಸಂಘಟನೆ ಜವಾಬ್ದಾರಿಯಿಂದ ನಿರ್ವಹಿಸುತ್ತಾ ಬಂದಿದೆ. ಹೊಸ ತಲೆಮಾರನ್ನು ಒಳಗೊಳ್ಳುವುದರ ಭಾಗವಾಗಿ ಬರುವ ಮೇ.2ರಂದು ಬೆಳಗಾವಿಯಲ್ಲಿ ವಿಚಾರ ಸಂಕಿರಣವನ್ನು ಬಂಡಾಯ ಸಂಘಟನೆ ಆಯೋಜಿಸುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಲೇಖಕಿಯ ಸಂಘದ ಅಧ್ಯಕ್ಷೆ ಡಾ.ಕೆ.ಆರ್.ಸಿದ್ದಗಂಗಮ್ಮ, ಸಿಐಟಿಯುನ ಜಿಲ್ಲಾ ಅಧ್ಯಕ್ಷೆ ಮಂದಾ ನೇವಗಿ, ಮಾನವ ಬಂಧುತ್ವ ವೇದಿಕೆಯ ರವಿ ಕಾಂಬಳೆ, ಅಡಿವೆಪ್ಪ ಇಟಗಿ, ರಾಮನಾಥ ಬನಶಂಕರಿ, ಸಿದ್ರಾಮ ತಳವಾರ, ರಾಜು ಗಸ್ತಿ, ಶಿವರಾಜ ಕಾಮಶೆಟ್ಟಿ, ಸುರೇಶ್ ಹನಗಂಡಿ, ಅಂಕುಶ ಪಾಟೀಲ ಇತರರಿದ್ದರು. ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದ ಸ್ವಾಗತಿಸಿದರು, ಕವಿ ನದೀಮ್ ಸನದಿ ವಂದಿಸಿದರು. ಸಂತೋಷ ನಾಯಕ ನಿರೂಪಿಸಿದರು.