ಶಿರಹಟ್ಟಿ: ರಾಜ್ಯ ಸರ್ಕಾರ ಜನಪರ ಯೋಜನೆ ಅನುಷ್ಠಾನಗೊಳಿಸುವ ಮೂಲಕ ದೇಶಕ್ಕೆ ಮಾದರಿ ರಾಜ್ಯವಾಗಿದೆ. ಸರ್ಕಾರದ ಪ್ರಮುಖ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯದಿಂದ ಎಲ್ಲ ವರ್ಗದ ಬಡ ಕುಟುಂಬಗಳಿಗೆ ಅನುಕೂಲವಾಗಿದ್ದು, ರಾಷ್ಟ್ರದಲ್ಲಿ ಈ ಯೋಜನೆಗಳು ಖ್ಯಾತಿಯಾಗಿವೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವೀರಯ್ಯ ಮಠಪತಿ ಹೇಳಿದರು.
ಶುಕ್ರವಾರ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಜರುಗಿದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಪದಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಸರ್ಕಾರದ ಎಲ್ಲ ಯೋಜನೆಗಳು ಸಮಾಜದ ಎಲ್ಲ ವರ್ಗಗಳಿಗೆ ಸಮರ್ಪಕವಾಗಿ ತಲುಪಬೇಕು. ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಲಾಭ ಸಿಗುವಂತಾಗಬೇಕು. ಮುಖ್ಯವಾಗಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಗ್ಯಾರಂಟಿ ಯೋಜನೆಗಳು ಆರ್ಥಿಕ ಶಕ್ತಿ, ಮಹಿಳಾ ಸಬಲೀಕರಣ, ಸ್ವಾಭಿಮಾನ ಹೆಚ್ಚಿಸಲು ಅನುಕೂಲಕರವಾಗಿವೆ. ಸೌಲಭ್ಯ ತಲುಪಲಿ ಇರುವ ತೊಡಕು ಸರಿಪಡಿಸಲು ಅಧಿಕಾರಿಗಳು ನಿರತರಾಗಬೇಕು. ತಾಂತ್ರಿಕತೆ ನೆಪವೊಡ್ಡಿ ಫಲಾನುಭವಿಗಳು ಅಲೆದಾಡುವಂತೆ ಮಾಡಬಾರದು ಎಂದು ಸೂಚನೆ ನೀಡಿದರು.ಸರ್ಕಾರದ ಉದ್ದೇಶ ಅಧಿಕಾರಿಗಳು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಸಂಬಂಧಿಸಿದ ಇಲಾಖೆಯ ಸಿಬ್ಬಂದಿಗಳು ಪ್ರತಿ ಫಲಾನುಭವಿಯ ದಾಖಲಾತಿ ತೆಗೆದುಕೊಂಡು ಯೋಜನೆ ಮುಟ್ಟಿಸಬೇಕು. ಮುಖ್ಯವಾಗಿ ಕೆವೈಸಿ, ಆಧಾರ ಕಾರ್ಡ್‌ನಲ್ಲಿ ದೋಷಗಳ ಕಾರಣದಿಂದ ಹಲವು ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಹೇಳಿದರು.
ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ಸರಿಯಾದ ಸಮಯಕ್ಕೆ ಬಸ್‌ಗಳಿಲ್ಲ. ಇದರಿಂದ ವಿದ್ಯಾರ್ಜನೆಗೆ ತೀವ್ರ ತೊಂದರೆಯಾಗಿದೆ. ತಾಲೂಕಿನ ಕೊನೆಯ ಹಳ್ಳಿಗಳ ಮಕ್ಕಳಿಗೆ ಇದರಿಂದ ತೀವ್ರ ತೊಂದರೆಯಾಗಿದೆ. ಬಸ್‌ಗಳಲ್ಲಿ ದುಪ್ಪಟ್ಟು ಜನ ಸಂಚರಿಸುವಂತಹ ಸ್ಥಿತಿ ಬಂದೊದಗಿದೆ. ಆದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ಸಮಸ್ಯೆ ತಕ್ಷಣ ಬಗೆಹರಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.ಗೃಹಜ್ಯೋತಿ ಅಡಿ ಈಗಾಗಲೇ ೨೨೯೦೦ ಅರ್ಜಿ ಬಂದಿದ್ದು, ೨೧೯೮ ಫಲಾನುಭವಿಗಳು ಸರ್ಕಾರದ ಸದುಪಯೋಗ ಪಡೆದಿದ್ದಾರೆ. ೧೮೦೦ ಅರ್ಜಿಗಳು ತಿರಸ್ಕೃತಗೊಂಡಿದ್ದು, ೨೪೭ ಅರ್ಜಿಗಳು ಬಾಕಿ ಇವೆ ಇದರಲ್ಲಿ ಮಂದಿರ ಮಸೀದಿ ಹಾಗೂ ಚರ್ಚಗಳು ಇದರ ವ್ಯಾಪ್ತಿಗೆ ಬರುವದಿಲ್ಲ. ಸರ್ಕಾರಿ ಶಾಲೆಗಳಿಗೆ ಅನ್ವಯವಾಗುತ್ತೆ ಎಂದು ಹೆಸ್ಕಾಂ ಸಹಾಯಕ ಅಧಿಕಾರಿ ಅಂಜನಪ್ಪ ಸಭೆಗೆ ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ತಾಲೂಕಿನಲ್ಲಿ ಪ್ರತಿ ತಿಂಗಳು ಅಂದಾಜು ೩೦ಲಕ್ಷಕ್ಕೂ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಯಾಣಿಸುತ್ತಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ೨೮ ಬಸ್‌ಗಳು ಸಂಚರಿಸುತ್ತಿದ್ದು, ಕಳೆದ ವಾರ ಶಿರಹಟ್ಟಿ ಸಾರಿಗೆ ಘಟಕಕ್ಕೆ ನಾಲ್ಕು ನೂತನ ಬಸ್ ಸರ್ಕಾರ ನೀಡಿದೆ ಎಂದು ಸಾರಿಗೆ ವ್ಯವಸ್ಥಾಪಕ ಸುಭಾಸ ಪತ್ತಾರ ಸಭೆಗೆ ಮಾಹಿತಿ ನೀಡಿದರು.ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಜನರಿಗೆ ಅನುಕೂಲವಾಗುವ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ನುಡಿದಂತೆ ಸರ್ಕಾರ ನಡೆದುಕೊಂಡಿದೆ. ಅನ್ನಭಾಗ್ಯ, ಶಕ್ತಿಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಅಧಿಕಾರಿಗಳು ಬೇಜವಾಬ್ದಾರಿ ತೋರದೇ ಸರ್ಕಾರದ ಯೊಜನೆ ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ತಾಪಂ ಇಓ ಎಸ್.ಎಸ್.ಕಲ್ಮನಿ, ಪಪಂ ಮಾಜಿ ಅಧ್ಯಕ್ಷ ಬುಡನಶಾ ಮಕಾಂದರ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಹೊನ್ನೇಶ ಪೋಟಿ, ರಸೂಲಗೌಡ ಪಾಟೀಲ, ಆನಂದಗೌಡ ಪಾಟೀಲ, ಮಹಾಂತೇಶಗೌಡ ಪಾಟೀಲ, ವಿಶಾಲಾಕ್ಷಿ ಹೊಂಬಣ್ಣವರ, ಮಹಾಪೀರಗೌಡ ಪಾಟೀಲ, ಮಹಾವೀರ ಮಂಟಗಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.