₹10 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ: ಕಠಿಣ ಕ್ರಮ

KannadaprabhaNewsNetwork |  
Published : Feb 06, 2024, 01:33 AM IST
ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ | Kannada Prabha

ಸಾರಾಂಶ

₹10 ಲಕ್ಷಕ್ಕಿಂತ ಹೆಚ್ಚು ಬಿಬಿಎಂಪಿಗೆ ಬರಬೇಕಿದ್ದ ಆಸ್ತಿ ತೆರಿಗೆ ಬಾಕಿ ಇದೆ. ತೆರಿಗೆ ಸಂಗ್ರಹದಲ್ಲಿ ಬಿಬಿಎಂಪಿಗೆ ಭಾರಿ ಹಿನ್ನೆಡೆಯಾಗಿದ್ದು, ಅಧಿಕಾರಿಳು ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯ ಪ್ರಮುಖ ಆದಾಯದ ಮೂಲವಾದ ಆಸ್ತಿ ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಲು ಕಂದಾಯ ವಿಭಾಗ ಹಿಂದೆ ಬಿದ್ದಿದೆ. 2023-24ನೇ ಸಾಲಿನಲ್ಲಿ ₹4,500 ಕೋಟಿ ತೆರಿಗೆ ಸಂಗ್ರಹದ ಗುರಿಯ ಪೈಕಿ ಜ.31ರ ವೇಳೆಗೆ ಕೇವಲ ₹3,500 ಕೋಟಿ ಮಾತ್ರ ಸಂಗ್ರಹಿಸಲಾಗಿದೆ.

ಬಿಬಿಎಂಪಿಯ ಬಹುತೇಕ ಯೋಜನೆಗಳ ಜಾರಿಗೆ ಆಸ್ತಿ ತೆರಿಗೆ ಪ್ರಮುಖ ಮೂಲವಾಗಿದೆ. ಹೊಂದಿರುವ ಗುರಿ ಸಾಧಿಸಲು ಉಳಿದ 55 ದಿನಗಳಲ್ಲಿ ₹1 ಸಾವಿರ ಕೋಟಿ ತೆರಿಗೆ ಸಂಗ್ರಹಿಸಬೇಕಾದ ಅನಿವಾರ್ಯತೆ ಪಾಲಿಕೆ ಕಂದಾಯ ವಿಭಾಗಕ್ಕೆ ಎದುರಾಗಿದೆ. ಹೀಗಾಗಿಯೇ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಸಿ ಮುಟ್ಟಿಸಲು ಕಂದಾಯ ವಿಭಾಗ ಮುಂದಾಗಿದ್ದು, ₹10 ಲಕ್ಷಕ್ಕೂ ಹೆಚ್ಚಿನ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್‌ ನೀಡುವುದು ಸೇರಿದಂತೆ ಇನ್ನಿತರ ಬಾಕಿ ವಸೂಲಿಗೆ ನಿಯಮದಲ್ಲಿರುವ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಆಸ್ತಿ ತೆರಿಗೆ ಸಂಗ್ರಹದಲ್ಲಿ ಕೊಂಚಮಟ್ಟಿಗೆ ಹಿನ್ನಡೆಯಾಗಿದೆ. ಹೀಗಾಗಿ ತೆರಿಗೆ ಸಂಗ್ರಹಕ್ಕೆ ವೇಗ ನೀಡಲು ನಿರ್ಧರಿಸಿ ಅತಿಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರನ್ನು ಗುರಿಯಾಗಿಸಿ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಆರ್‌ಒ, ಎಆರ್‌ಒಗಳಿಗೆ ತೆರಿಗೆ ವಸೂಲಿಯ ಗುರಿ ನೀಡಲಾಗುತ್ತಿದೆ ಎಂದರು.

‘ಮೊದಲು ಬಾಕಿ ತೆರಿಗೆ ಕಟ್ಟಿ,

ಬಳಿಕ ಮೇಲ್ಮನವಿ ಸಲ್ಲಿಸಿ’

ಬಾಕಿ ತೆರಿಗೆ ಹಾಗೂ ಅದಕ್ಕೆ ವಿಧಿಸಲಾಗುವ ದಂಡ, ಬಡ್ಡಿ ಪಾವತಿಗೆ ಸಂಬಂಧಿಸಿದಂತೆ ಕೆಲವೊಂದು ಗೊಂದಲಗಳಿವೆ. ಹೀಗಾಗಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ತೆರಿಗೆ ಪಾವತಿಸಿದ ನಂತರ ಆ ಬಗ್ಗೆ ಬಿಬಿಎಂಪಿಯಲ್ಲಿ ಮೇಲ್ಮನವಿ ಸಲ್ಲಿಸಬಹುದು. ಒಂದು ವೇಳೆ ಬಿಬಿಎಂಪಿ ಕಾಯ್ದೆಯಲ್ಲಿ ಬದಲಾವಣೆ ತಂದು ಬಡ್ಡಿ, ದಂಡವನ್ನು ಕಡಿಮೆ ಅಥವಾ ರದ್ದು ಮಾಡುವ ನಿರ್ಣಯವನ್ನು ಸರ್ಕಾರ ತೆಗೆದುಕೊಂಡರೆ, ತೆರಿಗೆ ಬಾಕಿ ಪಾವತಿಸಿ ಮೇಲ್ಮನವಿ ಸಲ್ಲಿಸಿದವರನ್ನು ಮೊದಲಿಗೆ ಪರಿಗಣಿಸಲಾಗುವುದು. ಅವರಿಗೆ ಕಾಯ್ದೆ ಬದಲಾವಣೆ ನಂತರ ಅವರಿಗೆ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ