3/40 ನಿವೇಶನಗಳಿಗೆ ಆಸ್ತಿ ತೆರಿಗೆ ವಿನಾಯಿತಿ?; ಬಿಬಿಎಂಪಿ ಆಸ್ತಿ ತೆರಿಗೆ ಕಾಯ್ದೆ ಮರುಪರಿಶೀಲನೆ

KannadaprabhaNewsNetwork |  
Published : Jan 17, 2024, 01:50 AM IST

ಸಾರಾಂಶ

ನೋಟಿಸ್‌ ಬಂದರೆ ಭಯಪಡಬೇಡಿ ಮಾನವೀಯ ನೆಲೆಗಟ್ಟಿನಲ್ಲಿ ತೆರಿಗೆ ವಿನಾಯಿತಿ ಸರ್ಕಾರದಿಂದಲೇ ಆಸ್ತಿ ಸರ್ವೆ ನಡೆಸಿ ಮನೆ ಬಾಗಿಲಿಗೆ ದಾಖಲೆ ರವಾನೆ: ಡಿಸಿಎಂ, ಶೇಷಾದ್ರಿಪುರಂನಲ್ಲಿ ‘ಬಾಗಿಲಿಗೆ ಬಂತು ಸರ್ಕಾರ’

ಕನ್ನಡಪ್ರಭ ವಾರ್ತೆ ಬೆಂಗಳೂರು

ನ್ಯೂನತೆಗಳಿಂದ ಕೂಡಿರುವ 2020ರ ಬಿಬಿಎಂಪಿ ಆಸ್ತಿ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಜೊತೆಗೆ ವಿಶೇಷವಾಗಿ 30/40 ನಿವೇಶನದಾರರು, ಶೆಡ್‌ ನಿವಾಸಿಗಳ ಆಸ್ತಿ ತೆರಿಗೆ ವಿನಾಯಿತಿ, ಹೆಚ್ಚಿನ ದಂಡ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಯ ನೀಡಿದ್ದಾರೆ.

ಮಂಗಳವಾರ ಬಿಬಿಎಂಪಿ ಪಶ್ಚಿಮ ವಲಯದ ಗಾಂಧಿನಗರ, ಮಲ್ಲೇಶ್ವರ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಶೇಷಾದ್ರಿಪುರಂನಲ್ಲಿ ಚಾಲನೆ ನೀಡಿ ಮಾತನಾಡಿದರು.

ಬಿಜೆಪಿಗರು ತಂದ 2020ರ ಬಿಬಿಎಂಪಿ ಆಸ್ತಿ ತೆರಿಗೆ ಕಾಯ್ದೆಯಿಂದ ಹೆಚ್ಚಿನ ಆಸ್ತಿ ತೆರಿಗೆ, ದುಬಾರಿ ದಂಡ ವಿಧಿಸಿದ ಸಾಕಷ್ಟು ದೂರು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆ ಮರುಪರಿಶೀಲನೆ ಅಗತ್ಯವಾಗಿದ್ದು, ತಿದ್ದುಪಡಿ ತರಲೇಬೇಕಾಗಿದೆ. ಕೆಲ ದಿನಗಳಲ್ಲಿ ಇದರ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ನಗರದ ಹಲವು ಕ್ಷೇತ್ರಗಳಲ್ಲಿ ಆಸ್ತಿ ತೆರಿಗೆ ವಿಚಾರದಲ್ಲಿ ಸಮಸ್ಯೆ ಆಗಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಕಾಲಮಿತಿಯಲ್ಲಿ ತೆರಿಗೆ ಪಾವತಿಸಿ ಎಂದು ನೊಟೀಸ್ ಬಂದಿದ್ದರೆ ಜನತೆ ಗಾಬರಿಯಾಗಬೇಡಿ. ಮಾನವೀಯತೆ ನೆಲೆಗಟ್ಟಲ್ಲಿ ದಂಡವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡುತ್ತೇವೆ. ಬಡವರಿಗೆ ವಿಧಿಸಲಾದ ಹೆಚ್ಚಿನ ತೆರಿಗೆ ಮನ್ನಾ ಮಾಡುವ ಮೂಲಕ ನೆರವಾಗಬೇಕು ಎಂಬ ಯೋಚನೆ ಇದೆ ಎಂದರು.

ಆಸ್ತಿ ತೆರಿಗೆ ಪಾವತಿ ಬಗ್ಗೆ ಜನರ ಮೇಲೆ ಒತ್ತಡ ಹೇರಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಬೆಂಗಳೂರಿನಲ್ಲಿ ಎಷ್ಟು ಆಸ್ತಿಗಳಿವೆ, ಯಾರ ಹೆಸರಿನಲ್ಲಿದೆ ಎಂಬ ದಾಖಲೆ ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರವೇ ಸಮೀಕ್ಷೆ ಮಾಡಿಸಿ, ಮನೆ ಬಾಗಿಲಿಗೇ ಸ್ವತ್ತಿನ ದಾಖಲೆಯನ್ನು ಉಚಿತವಾಗಿ ನೀಡಲಿದೆ ಎಂದು ತಿಳಿಸಿದರು.

ರಾಜ್ಯ ಯೋಜನೆ ಆಯೋಗದ ಉಪಾಧ್ಯಕ್ಷ ಪ್ರೊ.ರಾಜೀವ್ ಗೌಡ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್, ಬಿಎಂಆರ್‌ಡಿಎ ಕಮಿಷನರ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್, ಬಿಡಿಎ ಕಮಿಷನರ್ ಜಯರಾಮ್ ಇದ್ದರು.

ಹೊಸ ಜಾಹೀರಾತು ನೀತಿ

ನಗರದಲ್ಲಿ ಅನಧಿಕೃತ ಜಾಹೀರಾತು ನಿಷೇಧಕ್ಕೆ, ಫ್ಲೆಕ್ಸ್‌ ನಿಯಂತ್ರಿಸಲು ಹೊಸ ಜಾಹೀರಾತು ನೀತಿ ತರಲಾಗುವುದು. ಹೈಕೋರ್ಟ್‌ ಸೂಚನೆಯಂತೆ ಅನಧಿಕೃತ ಫ್ಲೆಕ್ಸ್‌ ನಿಷೇಧಿಸಲಾಗಿದೆ. ಯಾವುದೇ ಪಕ್ಷದವರಾಗಿರಲಿ, ಅಥವಾ ನನ್ನ ಫೋಟೋವನ್ನೇ ಹಾಕಿರಲಿ, ಎಲ್ಲ ಅನಧಿಕೃತ ಫ್ಲೆಕ್ಸ್ ತೆರವು ಮಾಡಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

‘ಕಸದ ಮಾಫಿಯಾವನ್ನು ಹತೋಟಿಗೆ ತರಬೇಕು’

ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು. ಬೆಂಗಳೂರಿನಲ್ಲಿ ನಿತ್ಯ ಹೊರಗಿನ ವಾಹನಗಳು ಹೊರತುಪಡಿಸಿ 55 ಲಕ್ಷ ವಾಹನ ಸಂಚಾರ ಮಾಡುತ್ತಿವೆ. ₹2 ಸಾವಿರ ಕೋಟಿ ಮೌಲ್ಯದ ವೈಟ್ ಟ್ಯಾಪಿಂಗ್ ರಸ್ತೆಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಇನ್ನು, ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಬದ್ಧರಾಗಿದ್ದು, ಇದರ ಹಿಂದಿನ ಮಾಫಿಯಾ ಹತೋಟಿಗೆ ತರಬೇಕಿದೆ ಎಂದರು.

ಜನರ ಸಮಸ್ಯೆ ಅರಿಯಲು ಜನಸ್ಪಂದನ: ದಿನೇಶ್‌

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಜನರ ಸಮಸ್ಯೆಯನ್ನು ನೇರವಾಗಿ ಅರಿತು ಪರಿಹಾರ ಕಲ್ಪಿಸಲು ಈ ಕಾರ್ಯಕ್ರಮ ಉತ್ತಮ ವೇದಿಕೆ. ವಿಶ್ವ ಮಟ್ಟದ ನಗರವಾದ ಬೆಂಗಳೂರಿನ ಬೆಳವಣಿಗೆ, ಅಭಿವೃದ್ಧಿಯನ್ನು ವೈಜ್ಞಾನಿಕವಾಗಿ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್‌ ಅಹ್ಮದ್‌ ಮಾತನಾಡಿ, ಬಡಜನರ ವಸತಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.

ಶಾಸಕ ಡಾ। ಸಿ.ಎನ್.ಅಶ್ವತ್ಥ ನಾರಾಯಣ, ಆಸ್ತಿ ತೆರಿಗೆ ಬಗ್ಗೆ, ಹಳೆ ಬಾಕಿ ವಸೂಲಿ ಬಗ್ಗೆ ಗಮನಹರಿಸುವ ಅಗತ್ಯವಿದೆ. ಸಾರಿಗೆ ವ್ಯವಸ್ಥೆ ಸಮರ್ಪಕಗೊಳಿಸಲು ಮಿನಿ ಬಸ್‌ಗಳನ್ನು ರಸ್ತೆಗೆ ಇಳಿಸಬೇಕಿದೆ. ಫುಟ್ಪಾತ್ ರಕ್ಷಣೆಗೆ ಆದ್ಯತೆ ಕೊಡಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ