- ನಗರಸಭೆ ಅಧ್ಯಕ್ಷೆ ಕವಿತಾ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ ಹರಿಹರ ಆಸ್ತಿ ತೆರಿಗೆ ಶೇ.3ರಿಂದ 5ರಷ್ಟು ಹೆಚ್ಚಳ, ನಗರೋತ್ಥಾನ ಕಾಮಗಾರಿ ಸ್ಥಗಿತ, ಬಿ ಖಾತೆ 700 ಅರ್ಜಿಯಲ್ಲಿ ಕೇವಲ25 ಅರ್ಜಿಗಳ ವಿಲೇವಾರಿ. ಇವು ನಗರಸಭಾ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಧ್ಯಕ್ಷತೆ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಳು.
ಸಭೆಯಲ್ಲಿ ವಿಷಯ ಮಂಡಿಸಿದ ಪೌರಾಯುಕ್ತ ಸುಬ್ರಮಣ್ಯ ಶ್ರೇಷ್ಠಿ, ಸರ್ಕಾರದಿಂದ ಸುತ್ತೋಲೆ ಬಂದಿದ್ದು, 2025-26ನೇ ಸಾಲಿನ ಆಸ್ತಿ ತೆರಿಗೆ ದರ ಪರಿಕ್ಷರಣೆ ಮಾಡಬೇಕಿದೆ. ಶೇ.3ರಿಂದ 5ರಷ್ಟು ತೆರಿಗೆ ದರ ಹೆಚ್ಚಳ ಮಾಡಬೇಕಿದೆ. ಶೇ.5ರಷ್ಟು ಹೆಚ್ಚಳ ಮಾಡಿದಲ್ಲಿ ನಗರಸಭೆಗೆ ₹25 ಲಕ್ಷ ಹೆಚ್ಚುವರಿ ಆದಾಯ ಲಭಿಸುತ್ತದೆ ಎಂದರು.ಈ ಹಿಂದೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ದರ ಹೆಚ್ಚಳವಾಗುತ್ತಿತ್ತು. ಅದರ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ನಗರಸಭೆ ಆಸ್ತಿ ತೆರಿಗೆ ಹೆಚ್ಚಳವಾಗುತ್ತಿತ್ತು. ಈ ಬಾರಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ದರ ಹೆಚ್ಚಳವಾಗಿಲ್ಲ. ಸರ್ಕಾರದ ಮಾರ್ಗಸೂಚಿ ಶೇ 3ರಿಂದ 5ರಷ್ಟು ತೆರಿಗೆ ಹೆಚ್ಚಳಕ್ಕೆ ಅನುಮೊದನೆ ನೀಡಬೇಕೆಂದು, ದರ ಹೆಚ್ಚಳ ಮಾಡದಿದ್ದಲ್ಲಿ ಸರ್ಕಾರದ ವಿವಿಧ ಅನುದಾನಗಳು ಲಭಿಸುವುದಿಲ್ಲ ಎಂದು ಸಭೆಗೆ ವಿವರಿಸಿದರು.
ದರ ಹೆಚ್ಚಳ ಮಾಡಿದ್ದರೆ, ಅನುದಾನ ಬರುವುದಿಲ್ಲ ಎನ್ನುತ್ತೀರಲ್ಲ ಹಾಗಾದರೆ ಸರ್ಕಾರದಿಂದ ಬರುವ ಎಸ್‍ಎಫ್‍ಸಿ, ನಗರೋತ್ಥಾನ ಸೇರಿದಂತೆ ಬಂದಿರುವ ಅನುದಾನಗಳು ಎಷ್ಟೆಷ್ಟು ಕಾಮಗಾರಿಗಳು ಪೂರ್ಣವಾಗಿವೆ ತಿಳಿಸಿ. ಅನಂತರ ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಚರ್ಚೆ ಮಾಡೋಣ ಎಂದು ಪಟ್ಟುಹಿಡಿದರು.
ನಗರಾದ್ಯಂತ ಇರುವ ಕಲ್ಯಾಣ ಮಂಟಪಗಳ ತೆರಿಗೆ ಬಾಕಿ ಹಣವೇ ₹5ರಿಂದ ₹6 ಕೋಟಿ ಇದೆ. ಅದನ್ನು ವಸೂಲಿ ಮಾಡದೇ ಕೇವಲ ಬಡಜನತೆಗೆ ಶೇ.5ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮೂಲಕ ₹25 ಲಕ್ಷ ಸಂಪಾದಿಸಲು ಹೊರಟಿದ್ದೀರಿ. ಮೊದಲು ಅದನ್ನು ವಸೂಲಿ ಮಾಡಿ ಎಂದು ವಸಂತ್ ಹಾಗೂ ನಗರಸಭೆ ಸದಸ್ಯರು ಪಟ್ಟುಹಿಡಿದರು. ಕಲ್ಯಾಣ ಮಂಟಪದವರಿಗೆ ನೋಟೀಸ್ ನೀಡಿದ್ದೇವೆ. ಕೆಲ ಕಲ್ಯಾಣ ಮಂಟಪಗಳು ಅಕ್ರಮವಾಗಿವೆ. ಹಾಗಾಗಿ, ಅವುಗಳಿಂದ ತೆರಿಗೆ ವಸೂಲಿ ಕಷ್ಟವಾಗಿದೆ ಎಂದು ತಿಳಿಸಲಾಯಿತು.
ಸರ್ಕಾರ ಈಗಾಗಲೇ ಬಿ. ಖಾತಾ ಮಾಡಲು ಅನುಮೋದನೆ ನೀಡಿ ಒಂದು ತಿಂಗಳಾಗಿದೆ. ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ಅರ್ಜಿಗಳು ವಿಲೇವಾರಿಯಾಗಿವೆ ಎಂಬ ಶಂಕರ್ ಖಟಾವ್‍ಕರ್ ಪ್ರಶ್ನೆಗೆ, 700 ಅರ್ಜಿಗಳು ಬಂದಿವೆ ಅರ್ಜಿಗಳು ದಾಖಲೆಗಳು ಅಪೂರ್ಣವಾಗಿರುವ ಹಿನ್ನೆಲೆ ಅನೇಕ ಅರ್ಜಿಗಳಿಗೆ ಹಿಂಬರಹ ನೀಡಿ ತಿಳಿಸಲಾಗಿದೆ. 25 ಅರ್ಜಿಗಳು ವಿಲೇವಾರಿಯಾಗಿವೆ ಎಂದು ಮಾಹಿತಿ ನೀಡಲಾಯಿತು.
- - -
ಹರಿಹರದ ನಗರಸಭೆಯಲ್ಲಿ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು.