ಗದಗ ಜಿಲ್ಲಾದ್ಯಂತ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ

KannadaprabhaNewsNetwork |  
Published : Aug 27, 2026, 02:45 AM IST
ಗದುಗಿನಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಸ್ಮರಣಾರ್ಥ ಈದ್ ಮಿಲಾದ್‌ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. | Kannada Prabha

ಸಾರಾಂಶ

ಪ್ರವಾದಿ ಮುಹಮ್ಮದ್‌ ಅವರು ಮಾನವಕುಲಕ್ಕೆ ಮಾತ್ರವಲ್ಲದೆ ಸಮಸ್ತ ಜೀವಜಾಲಕ್ಕೆ ದಯೆ, ಕರುಣೆ, ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಮಾರ್ಗವನ್ನು ತೋರಿಸಿದ ಮಹಾನ್ ಮಾರ್ಗದರ್ಶಕರಾಗಿದ್ದಾರೆ.

ಗದಗ: ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನದ ಸ್ಮರಣಾರ್ಥ ಈದ್ ಮಿಲಾದ್ ಹಬ್ಬವನ್ನು ನಗರದಲ್ಲಿ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಪ್ರವಾದಿಯವರ ಗುಣಗಾನ, ನಾತ್ ಹಾಗೂ ಸಲಾಂ ಸಲ್ಲಿಸಲಾಯಿತು. ಮೆರವಣಿಗೆಯು ನಗರದ ವಿವಿಧ ಪ್ರಮುಖ ಬೀದಿಗಳ ಮೂಲಕ ಸಾಗಿ ಸೆಂಟ್ರಲ್ ಸ್ಕೂಲ್ ಆವರಣಕ್ಕೆ ತಲುಪಿತು.

ಈ ವೇಳೆ ಮಸ್ಜಿದ್- ಎ- ತಾಜ್- ಉಲ್- ವರಾ ಮಸೀದಿಯ ಇಮಾಮ್ ಮೌಲಾನಾ ಅಂಜರ್ ಹುಸೇನ್ ಮಾತನಾಡಿ, ಈದ್ ಮಿಲಾದ್‌ ಆಚರಣೆಯ ಮೂಲಕ ಸಮಾಜದಲ್ಲಿ ಪ್ರಾಮಾಣಿಕತೆ, ಸತ್ಯ, ಶಾಂತಿ ಹಾಗೂ ಸಹೋದರತ್ವದ ಭಾವನೆ ಮತ್ತಷ್ಟು ಬೆಳೆಯಬೇಕು. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರದಂತಹ ದುರ್ಗುಣಗಳು ದೂರವಾಗಿಸಬೇಕೆಂದರು.

ಪ್ರವಾದಿ ಮುಹಮ್ಮದ್‌ ಅವರು ಮಾನವಕುಲಕ್ಕೆ ಮಾತ್ರವಲ್ಲದೆ ಸಮಸ್ತ ಜೀವಜಾಲಕ್ಕೆ ದಯೆ, ಕರುಣೆ, ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಮಾರ್ಗವನ್ನು ತೋರಿಸಿದ ಮಹಾನ್ ಮಾರ್ಗದರ್ಶಕರಾಗಿದ್ದಾರೆ. ಇಹಲೋಕ ಮತ್ತು ಪರಲೋಕದ ಯಶಸ್ಸಿನ ಮಾರ್ಗವನ್ನು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಜನ್ಮದಿನದ ಸ್ಮರಣಾರ್ಥ ಈದ್ ಮಿಲಾದ್‌ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.

ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ರಬಿ ಉಲ್- ಅವ್ವಲ್‌ನ 12ನೇ ದಿನದಂದು ವಿಶ್ವಾದ್ಯಂತ ಮುಸ್ಲಿಮರು ಈದ್ ಮಿಲಾದ್‌ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಪ್ರವಾದಿ ಮುಹಮ್ಮದ್ ಅವರು ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಕ್ರಿ.ಶ. 571ರಲ್ಲಿ ಜನಿಸಿದರು. ಅವರು ಪವಿತ್ರ ಕುರಾನ್‌ನ ಸಂದೇಶಗಳನ್ನು ಜನರಿಗೆ ಸಾರುವುದರ ಜತೆಗೆ, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಯಾಯಿಗಳಿಗೆ ಮಾದರಿಯಾಗಿದ್ದರು ಎಂದರು.

ಈ ವೇಳೆ ಮಸ್ಜಿದ್- ಎ - ತಾಜ್- ಉಲ್- ವರಾ ತಾಜ್‌ನಗರ, ಮದನಿ ಮಸೀದಿ, ಮಸ್ಜಿದ್- ಎ- ಕೂಬಾ, ಕೆಎಸ್‌ಆರ್‌ಟಿಸಿ ಕಾಲನಿ, ಮಸ್ಜಿದ್- ಎ- ಇಮಾಮ್- ಎ- ಆಜಂ ದಖನಿ ಗಲ್ಲಿ ಸೇರಿದಂತೆ ವಿವಿಧ ಮಸೀದಿಗಳ ಸದಸ್ಯರು ಹಾಗೂ ಅಹ್ಲೇ ಸುನ್ನತ್ ವಲ್ ಜಮಾತ್‌ನವರು ಇದ್ದರು.ಜಿಲ್ಲಾದ್ಯಂತ ಈದ್ ಮಿಲಾದ್ ಆಚರಣೆ

ಗದಗ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1501ನೇ ಜಯಂತಿ ಅಂಗವಾಗಿ ಬುಧವಾರ ಗದಗ- ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಅಂಜುಮನ್ ಏ ಇಸ್ಲಾಂ ಕಮಿಟಿ ಹಾಗೂ ಟಿಪ್ಪು ಸುಲ್ತಾನ ಯುಥ್ ಅಸೋಸಿಯೇಶನ್ ಸಹಯೋಗದಲ್ಲಿ ಇಲ್ಲಿಯ ಪಾಪನಾಶಿ ರಸ್ತೆಯಲ್ಲಿಯ ಮಾಬು ಸುಬಾನಿ ದರ್ಗಾದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.ಮೆರವಣಿಗೆಯಲ್ಲಿ ಮಹಮ್ಮದ್ ಪೈಗಂಬರರ ಕುರಿತು ಹಾಪೀಜ್ ಸಲೀಂ ಅಹ್ಮದ್ ಮಂಗಳೂರು ಅವರ ನೇತೃತ್ವದಲ್ಲಿ ಹಾಡುಗಳನ್ನು ಹಾಡಿ ಜೈಘೋಷ ಹಾಕಲಾಯಿತು. ಗ್ರಾಮದ ಹಿರೇಮಸೂತಿ ತಲುಪಿದ ಮೆರವಣಿಗೆ ನಂತರ ಮಹಮ್ಮದ್ ಪೈಗಂಬರರ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಾರ್ವಜನಿಕರ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರ ಅಹ್ಮದ ಕಿರೀಟಗೇರಿ, ಉಪಾಧ್ಯಕ್ಷ ದಾದಸಾಬ ಕೊರ್ಲಹಳ್ಳಿ, ಟಿಪ್ಪು ಸುಲ್ತಾನ ಯುಥ್ ಅಸೋಶಿಯೇಶನ್ ಅಧ್ಯಕ್ಷ ಹೈದರಲಿ ನದಾಫ, ಉಪಾಧ್ಯಕ್ಷ ರಿಯಾಜ ಮಸೂತಿ ಸೇರಿದಂತೆ ಮುಸಲ್ಮಾನ ಸಮಾಜದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಾಸ ಸೌಹಾರ್ದ ಕೋ​ ಆಪರೇಟಿವ್ ಬ್ಯಾಂಕ್ ಶೇ. 16 ಡಿವಿಡೆಂಡ್ ಘೋಷಣೆ
ವಿಜಯನಗರ ಜಿಲ್ಲೆಯಲ್ಲಿ ಸಂಭ್ರಮದಿಂದ ಈದ್‌ ಮಿಲಾದ್‌ ಆಚರಣೆ