ಆಗಸ್ಟ್ 29ರಿಂದ ರಾಘವೇಂದ್ರ ರಾಯರ 355ನೇ ಆರಾಧನಾ ಮಹೋತ್ಸವ

KannadaprabhaNewsNetwork |  
Published : Aug 27, 2026, 02:45 AM IST
ಶ್ರೀರಾಘವೇಂದ್ರ ಸ್ವಾಮಿಗಳ ಮಠ. | Kannada Prabha

ಸಾರಾಂಶ

ಮೂರು ದಿನಗಳ ಕಾಲ ನಡೆಯುವ ಆರಾಧನಾ ಮಹೋತ್ಸವದ ಅಂಗವಾಗಿ ಸಂಗೀತ, ಭಜನೆ, ಪ್ರಸಾದ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ.

ಮಹೇಶ ಛಬ್ಬಿ

ಗದಗ: ರಾಘವೇಂದ್ರತೀರ್ಥ ಸಾರ್ವಭೌಮರ 355ನೇ ಆರಾಧನಾ ಮಹೋತ್ಸವ ಆ. 29, 30 ಹಾಗೂ 31ರಂದು ನಗರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಗದಗ ಶಾಖಾ ಮಠದಲ್ಲಿ ಶ್ರದ್ಧಾ- ಭಕ್ತಿಯಿಂದ ನೆರವೇರಲಿದೆ.

ಪೀಠಾಧಿಪತಿಗಳಾದ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಶ್ರೀಗುರು ರಾಘವೇಂದ್ರ ರಾಯರ 355ನೇ ಆರಾಧನಾ ಮಹೋತ್ಸವ ಶ್ರೀಮಠದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ. ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಶ್ರೀಗುರು ರಾಯರಿಗೆ ವಿಶೇಷ ಪೂಜೆ, ಪಂಚಾಮೃತ, ಕನಕಾಭಿಷೇಕ, ಸತ್ಯನಾರಾಯಣ ಪೂಜೆ ಶ್ರದ್ಧಾ- ಭಕ್ತಿಯಿಂದ ನಡೆಯಲಿದೆ.

ಮೂರು ದಿನಗಳ ಕಾಲ ನಡೆಯುವ ಆರಾಧನಾ ಮಹೋತ್ಸವದ ಅಂಗವಾಗಿ ಸಂಗೀತ, ಭಜನೆ, ಪ್ರಸಾದ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ. ಪ್ರತಿದಿನ ನಡೆಯಲಿರುವ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

3 ದಿನ ರಥೋತ್ಸವ: ಆರಾಧನಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ರಥೋತ್ಸವವು 3 ದಿನಗಳ ಕಾಲ ವಿಶೇಷ ವೈಭವದಿಂದ ಜರುಗಲಿದೆ. ಗುರು ರಾಯರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಭಕ್ತರ ಜಯಘೋಷ, ಭಜನೆ ಹಾಗೂ ಸಂಕೀರ್ತನೆಯೊಂದಿಗೆ ರಾಜ ಬೀದಿಗಳಲ್ಲಿ ಮಹಾ ರಥೋತ್ಸವ ನಡೆಸಲು ಶ್ರೀಮಠ ಸಿದ್ಧತೆ ನಡೆಸಿದೆ.

ಶ್ರೀಮಠಕ್ಕೆ ಹೂವಿನ ಅಲಂಕಾರ: ಆರಾಧನಾ ಮಹೋತ್ಸವದ ಹಿನ್ನೆಲೆ ಶ್ರೀಮಠಕ್ಕೆ ವಿಶೇಷ ಮೆರುಗು ನೀಡಲು ಸಿದ್ಧತೆ ನಡೆದಿದ್ದು, ವಿವಿಧ ಬಗೆಯ ಬಣ್ಣಬಣ್ಣದ ಹೂವು, ವಿದ್ಯುತ್‌ ದೀಪಗಳಿಂದ ಮಠದ ಮುಂಭಾಗ, ಪ್ರವೇಶದ್ವಾರ, ವೃಂದಾವನದ ಸುತ್ತಮುತ್ತ ಹಾಗೂ ಮಠದ ಆವರಣವನ್ನು ಅಲಂಕರಿಸಲಾಗುವುದು. ಹೂವು, ವಿದ್ಯುತ್‌ ದೀಪಾಲಂಕಾರದಿಂದ ಶ್ರೀಮಠವು ಕಣ್ಮನ ಸೆಳೆಯುವಂತೆ ಕಂಗೊಳಿಸಲಿದೆ.

ಭಕ್ತರಿಗಾಗಿ ವಿಶೇಷ ವ್ಯವಸ್ಥೆ: ಆರಾಧನಾ ಮಹೋತ್ಸವಕ್ಕೆ ಸ್ಥಳೀಯ ಭಕ್ತರಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿವಿಧ ಜಿಲ್ಲೆಗಳಿಂದಲೂ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದರ್ಶನ, ತೀರ್ಥಪ್ರಸಾದ ಹಾಗೂ 3 ದಿನಗಳ ಕಾಲ ಅನ್ನಸಂತರ್ಪಣೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ.ಗುರುರಾಯರ ಆರಾಧನಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾರಥೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರು ರಾಯರ ಕೃಪೆಗೆ ಪಾತ್ರರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9739274755 ಸಂಪರ್ಕಿಸಬೇಕು ಎಂದು ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಕೋರಿದ್ದಾರೆ.

ಶ್ರೀಮಠದಲ್ಲಿ ಆ. 27ರಂದು ಸಂಜೆ 6ಕ್ಕೆ ಧ್ವಜಾರೋಹಣ, ಧಾನ್ಯ ಪೂಜಾ, ಲಕ್ಷ್ಮೀ ಪೂಜೆ, ಗೋಪೂಜಾ, ಸ್ವಸ್ತಿ ವಾಚನ ಹಾಗೂ ಮಹಾ ಮಂಗಳಾರತಿ ನೆರವೇರಲಿದೆ.

ಆ. 28ರಂದು ಬೆಳಗ್ಗೆ 8ಕ್ಕೆ ಯಜುರ್ವೇದ ಉಪಾಕರ್ಮ ನೆರವೇಲಿದೆ. ನಂತರ ಬೆಳಗ್ಗೆ 10ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಲಿದೆ. ಆ. 29ರಂದು ಬೆಳಗ್ಗೆ 7ಕ್ಕೆ ರಾಯರಿಗೆ ಪಾದಪೂಜೆ, ಪಂಚಾಮೃತ ನೆರವೇರಲಿದೆ. ಬೆಳಗ್ಗೆ 9.30ಕ್ಕೆ ಕನಕಾಭಿಷೇಕ, ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಹಸ್ತೋದಕ ಮಹಾಮಂಗಳಾರತಿ ನಂತರ ಪ್ರಸಾದ ಸೇವೆ ಜರುಗಲಿದೆ. ಸಂಜೆ 5ಕ್ಕೆ ಭಜನೆ, ರಥೋತ್ಸವ, ಸ್ವಸ್ತಿವಾಚನ ನೆರವೇರಲಿದೆ.

ಆ. 30ರಂದು ಬೆಳಗ್ಗೆ 7ಕ್ಕೆ ರಾಯರಿಗೆ ಕ್ಷೀರಾಭಿಷೇಕ (108 ಲೀ.) ಪಂಚಾಮೃತ ನಡೆಯುವುದು. ಬೆಳಗ್ಗೆ 9.30ಕ್ಕೆ ಕನಕಾಭಿಷೇಕ, ಉಪನ್ಯಾಸ, ಮಧ್ಯಾಹ್ನ 12.30ಕ್ಕೆ ಹಸ್ತೋದಕ ಮಹಾಮಂಗಳಾರತಿ ನಂತರ ಪ್ರಸಾದ ಸೇವೆ ನಡೆಯುವುದು. ಸಂಜೆ 5ಕ್ಕೆ ಸಂಗೀತ ಕಾರ್ಯಕ್ರಮ ನಂತರ 6.30ಕ್ಕೆ ರಥೋತ್ಸವ, ಸ್ವಸ್ತಿವಾಚನ ನೆರವೇರಲಿದೆ.

ಆ. 31ರಂದು ಬೆಳಗ್ಗೆ 7ಕ್ಕೆ ಪಾದಪೂಜೆ, ಪಂಚಾಮೃತ, ಬೆಳಗ್ಗೆ 10ಕ್ಕೆ ನಗರದ ರಾಜ ಬೀದಿಗಳಲ್ಲಿ ಮಹಾರಥೋತ್ಸವ ಜರುಗುವುದು. ಮಧ್ಯಾಹ್ನ 12ಕ್ಕೆ ಕನಾಕಾಭಿಷೇಕ ನಂತರ ಹಸ್ತೋದಕ ಮಹಾ ಮಂಗಳಾರತಿ, ಪ್ರಸಾದ ಸೇವೆ ಜರುಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಾಸ ಸೌಹಾರ್ದ ಕೋ​ ಆಪರೇಟಿವ್ ಬ್ಯಾಂಕ್ ಶೇ. 16 ಡಿವಿಡೆಂಡ್ ಘೋಷಣೆ
ವಿಜಯನಗರ ಜಿಲ್ಲೆಯಲ್ಲಿ ಸಂಭ್ರಮದಿಂದ ಈದ್‌ ಮಿಲಾದ್‌ ಆಚರಣೆ