ತುಮಕೂರು ಅಥವಾ ಬಿಡದಿ ಬಳಿ ಬೆಂಗಳೂರಿಗೆ 2ನೇ ಏರ್ಪೋರ್ಟ್‌ಗೆ ಪ್ರಸ್ತಾವನೆ : ಪರಮೇಶ್ವರ್‌

KannadaprabhaNewsNetwork | Updated : Feb 06 2025, 08:42 AM IST

ಸಾರಾಂಶ

ಬೆಂಗಳೂರಿಗೆ 2ನೇ ಏರ್ಪೋರ್ಟ್‌ಗೆ ತುಮಕೂರು ಮತ್ತು ಬಿಡದಿಯನ್ನು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಡಾ। ಜಿ.ಪರಮೇಶ್ವರ್ ಹೇಳಿದ್ದಾರೆ.

  ಬೆಂಗಳೂರು : ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವನ್ನು ತುಮಕೂರು ಅಥವಾ ಬಿಡದಿಯಲ್ಲಿ ನಿರ್ಮಿಸುವ ಪ್ರಸ್ತಾಪ ಚರ್ಚೆಯಲ್ಲಿದೆ. ದೇವನಹಳ್ಳಿ ವಿಮಾನ ನಿಲ್ದಾಣದ ವೇಳೆಯೇ ಬಿಡದಿಯಲ್ಲಿ ಮಾಡಲು ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ, ನಾಗರಿಕ ವಿಮಾನಯಾನದ ಮಹಾ ನಿರ್ದೇಶನಾಲಯ (ಡಿಜಿಸಿಎ) ತಾಂತ್ರಿಕ ಕಾರಣಗಳಿಗಾಗಿ ಬಿಡದಿಯಲ್ಲ ಆಗಲ್ಲ ಎಂದಿತ್ತು ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಹಾಗೂ ಬಿಡದಿಯಲ್ಲಿ ನಿರ್ಮಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ. ನಾವು ನಮ್ಮ ಪ್ರಸ್ತಾವನೆಯನ್ನು ಕೇಂದ್ರ ಡಿಜಿಸಿಎಗೆ ಕಳುಹಿಸುತ್ತೇವೆ. ತಾಂತ್ರಿಕ ಮಾನದಂಡ ಹಾಗೂ ಮಾರ್ಗಸೂಚಿ ಪರಿಗಣಿಸಿ ಯಾವುದು ಸೂಕ್ತ ಎಂದು ಅವರು ನಿರ್ಧಾರ ಮಾಡುತ್ತಾರೆ. ದೇವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣದ ವೇಳೆಯೇ ಬಿಡದಿ ಆಯ್ಕೆಯಾಗಿತ್ತು. ಆದರೆ ಡಿಜಿಸಿಎ ತಾಂತ್ರಿಕ ಕಾರಣಗಳಿಗಾಗಿ ಬಿಡದಿಯಲ್ಲಿ ವಿಮಾನ ನಿಲ್ದಾಣ ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಈಗ ಯಾವ ರೀತಿ ಪರಿಗಣಿಸುತ್ತಾರೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು.

ಇನ್ನು ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಪ್ರಸ್ತಾವನೆ ಕಳುಹಿಸಿರುವುದು ಹಳೆಯ ವಿಷಯ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದರು.

ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು ಎಂಬುದಷ್ಟೇ ನಮ್ಮ ಬಯಕೆ. ದೇವನಹಳ್ಳಿಯಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಚೆನ್ನೈಗೆ 40 ನಿಮಿಷದಲ್ಲಿ ವಿಮಾನದಲ್ಲಿ ಪ್ರಯಾಣಿಸಬಹುದು. ಆದರೆ ಪ್ರಕ್ರಿಯೆಗೆ ಎರಡು ಗಂಟೆ ಬೇಕಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕು. ಹೀಗಾಗಿ ಮುಂಬೈ, ದೆಹಲಿ ಸೇರಿ ಎಲ್ಲಾ ಮಹಾನಗರಗಳಲ್ಲಿರುವಂತೆ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗಾಗಿಯೇ ನಿರ್ಮಾಣವಾಗಬೇಕು ಎಂದು ಹೇಳಿದರು.

ಒಂದು ಕಡೆ ದೇಶೀಯ ವಿಮಾನಗಳ ನಿಲ್ದಾಣ ಹಾಗೂ ಮತ್ತೊಂದೆಡೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಬೇಕೇ? ಅಥವಾ ಯಾವ ರೀತಿ ಮಾಡಬೇಕು ಎಂಬುದನ್ನು ರಾಜ್ಯದ ಬೆಳವಣಿಗೆಯ ಹಿತದೃಷ್ಟಿಯಿಂದ ನೋಡಬೇಕಿದೆ. ತುಮಕೂರಿನಲ್ಲಿ ಈಗಾಗಲೇ ಜಾಗ ಗುರುತಿಸಿ ವರದಿ ನೀಡಿದ್ದೇವೆ. ಅದೇ ರೀತಿ ಕೆಲವರು ಬಿಡದಿಯಲ್ಲಿ ಆಗಬೇಕು ಎಂದು ಹೇಳಿತ್ತಾರೆ. ಅಂತಿಮವಾಗಿ ಯಾವುದು ಸೂಕ್ತ ಎಂಬುದನ್ನು ರಾಜ್ಯ ಸರ್ಕಾರ ಹಾಗೂ ಡಿಜಿಸಿಎ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.

Share this article