ಮಳೆ ನೀರು ಸಂಗ್ರಹಿಸಲು ಚೆಕ್‌ಡ್ಯಾಂ ನಿರ್ಮಾಣಕ್ಕಾಗಿ ಪ್ರಸ್ತಾವ: ಶಾಸಕ ಎಂ.ವೈ.ಪಾಟೀಲ

KannadaprabhaNewsNetwork | Published : Oct 2, 2024 1:01 AM

ಸಾರಾಂಶ

2022 -23ನೇ ಸಾಲಿನ ಅಪೆಂಡಿಕ್ಸ್‌ ಈ ಯೋಜನೆ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ 5 ಕೋಟಿ ಮೊತ್ತದ ಹೈದ್ರಾದಿಂದ ಕಡಣಿ ಬ್ಯಾರೇಜ್ ವರೆಗಿನ 3 ಕಿ.ಮೀ. ರಸ್ತೆ ಕಾಮಗಾರಿಗೆ ಅಡಿಗಲ್ಲು

ಕನ್ನಡಪ್ರಭ ವಾರ್ತೆ ಅಫಜಲ್ಪುರ

ತಾಲೂಕಿನ ಸಮಗ್ರ ನೀರಾವರಿ ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಜೊತೆಗೆ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಭೀಮಾ ನದಿಯಿಂದ ಕಾಲುವೆ ಮೂಲಕ ನೀರು ಹರಿಸುವುದು ಮತ್ತು ಮಳೆ ನೀರು ಸಂಗ್ರಹಿಸಲು ಚೆಕ್‌ಡ್ಯಾಂ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.

ತಾಲೂಕಿನ ಕರಜಗಿ ಗ್ರಾಮದಲ್ಲಿ 2022 -23ನೇ ಸಾಲಿನ ಅಪೆಂಡಿಕ್ಸ್‌ ಈ ಯೋಜನೆ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ 5 ಕೋಟಿ ಮೊತ್ತದ ಹೈದ್ರಾದಿಂದ ಕಡಣಿ ಬ್ಯಾರೇಜ್ ವರೆಗಿನ 3 ಕಿ.ಮೀ. ರಸ್ತೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಯೊಂದು ಹಳ್ಳಿಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ. ಈಗಾಗಲೇ ಆದ್ಯತೆ ಮೇರೆಗೆ ಹಲವು ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇನ್ನುಳಿದ ಗ್ರಾಮಗಳನ್ನು ಮುಂದಿನ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು. ರಾಜ್ಯ ಸರ್ಕಾರ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಿದ್ದು ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಹೋಗಲು ಉತ್ತಮ ಸುಸಜ್ಜಿತ, ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದರು.

ಕರಜಗಿ ಹೋಬಳಿ ಕೇಂದ್ರದಲ್ಲಿ ಮಾಶಾಳ, ಮಣ್ಣೂರ, ಉಡಚಾಣ ದೊಡ್ಡ ಗ್ರಾಮಗಳಾಗಿದ್ದು, ಈ ಭಾಗದ ಯುವ ಪ್ರತಿಭೆಗಳಿಗೆ ಅನುಕೂಲವಾಗಲು ಗ್ರಾಮಸ್ಥರು ಉಚಿತವಾಗಿ ಜಮೀನು ನೀಡಿದರೆ ಶೀಘ್ರದಲ್ಲೇ ಸುಸಜ್ಜಿತವಾದ ಗ್ರಾಮೀಣ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ಬಂದರವಾಡ ಗ್ರಾಮದ ಭೀಮಾ ನದಿಯ ಹತ್ತಿರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ತುಂಬುವ ಯೋಜನೆ ಸರ್ಕಾರದ ಮುಂದಿದ್ದು, ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜನಸಂಖ್ಯೆ ಆಧರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಪಾಟೋಳೆ, ಉಪಾಧ್ಯಕ್ಷ ಇರ್ಫಾನ ಜಮಾದಾರ, ಜಿಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ, ತಹಸೀಲ್ದಾರ್‌ ಸಂಜೀವಕುಮಾರ ದಾಸರ, ಸಂತೋಷಕುಮಾರ ಸಜ್ಜನ ಮುಖಂಡರಾದ ಮಹಾದೇವಪ್ಪ ಕರೂಟಿ, ಭೀಮಾಶಂಕರ ಹೊನ್ನಕೇರಿ, ರಮೇಶ ಪೂಜಾರಿ, ಶಿವಾನಂದ ಗಾಡಿಸಾಹುಕಾರ, ರಾಮಣ್ಣ ನಾಯಕೋಡಿ ಜ್ಞಾನೇಶ್ವರಿ ಪಾಟೀಲ ಅನಸೂಯಾ ಸುಲೇಕರ, ಅಂಬಣ್ಣ ನರಗೋದಿ ಶರಣು ಈಶ್ವರಗೊಂಡ, ವೇಣು ಮಾಧವ ಅವಧಾನಿ, ಜಗದೀಶ ದೇಶಟ್ಟಿ, ಶ್ರೀಕಾಂತ ನಿವರಗಿ, ರಾಜಶೇಖರ ಪ್ಯಾಟಿ, ಮಲ್ಲು ಕಿಣಗಿ, ಶ್ರೀಕಾಂತ ಈಶ್ವರಗೊಂಡ, ಭೀಮಾಶಂಕರ ಬುಯ್ಯಾರ, ಸುರೇಶ ಉಪ್ಪಿನ, ಲೋಕಣ್ಣ ಜಿಡ್ಡಗಿ, ಶಿವಶರಣ ಉಡಗಿ, ಶಂಕರಲಿಂಗ ನಡಗೇರಿ, ಇಸ್ಮಾಯಿಲ್ ಮುಲ್ಲಾ, ಮೌಲಾನಾ ಚೌಧರಿ, ಖಾಜಾಬಾಯಿ ಚೌದರಿ, ಇತರರಿದ್ದರು.

Share this article