ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ಮತ್ತಷ್ಟು ಅಭಿವೃದ್ಧಿ ಆಗಬೇಕಿರುವ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಮಾದರಿಯಲ್ಲಿ ಗ್ರೇಟರ್ ತುಮಕೂರು ಘೋಷಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ತಿಳಿಸಿದ್ದಾರೆ. ತುಮಕೂರು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ 300 ಹಾಸಿಗೆಗಳ ಜಿಲ್ಲಾಸ್ಪತ್ರೆ ನೂತನ ಕಟ್ಟಡದ ಶಂಕುಸ್ಥಾಪನೆ, 100 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ, 100 ಹಾಸಿಗೆಗಳುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನರ್ಸಿಂಗ್ ಕಾಲೇಜು, ಹಾಸ್ಟಲ್ ಕಟ್ಟಡಗಳ ಲೋಕಾರ್ಪಣೆ ಹಾಗೂ ತುಮಕೂರು ತಾಲೂಕಿನ ಭೀಮಸಂದ್ರ ಕೆರೆಯಿಂದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ 30 ಎಂ.ಎಲ್.ಡಿ. ತೃತೀಯ ಹಂತದ ಸಂಸ್ಕರಿಸಿದ ನೀರು ಪೂರೈಕೆ ಯೋಜನೆ ಉದ್ಘಾಟನೆ ಸೇರಿದಂತೆ ವಿವಿಧ 645 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕಿದೆ. ಆಗುತ್ತಿವೆ. ಅಂತೆಯೇ ತುಮಕೂರು ನಗರದ ಅಭಿವೃದ್ಧಿಯೂ ಪೂರಕವಾಗಿ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಮಾದರಿಯಲ್ಲಿ ಗ್ರೇಟರ್ ತುಮಕೂರು ಯೋಜನೆ ಪ್ರಸ್ತಾವವನ್ನು ಸರ್ಕಾರದ ಮುಂದೆ ಮಂಡಿಸಲಾಗುವುದು ಎಂದು ಅವರು ತಿಳಿಸಿದರು. ತುಮಕೂರು ನಗರದಲ್ಲಿ ಬಹು ಕಾಲದಿಂದ ನಾಗರಿಕರಿಗೆ ನಿವೇಶನಗಳ ಹಂಚಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ 6 ತಿಂಗಳೊಳಗಾಗಿ 2 ಸಾವಿರ ನಿವೇಶನಗಳನ್ನು ಹಂಚಲಾಗುವುದು ಎಂದು ತಿಳಿಸಿದ ಅವರು, ನೆನೆಗುದಿಗೆ ಬಿದ್ದಿರುವ ೨ನೇ ಹಂತದ ಒಳಚರಂಡಿ ಯೋಜನೆ ಕಾಮಗಾರಿಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿವೆ ಎಂದರು.ತ್ಯಾಜ್ಯ ನಿರ್ವಹಣೆ ಬಹು ದೊಡ್ಡ ಸಮಸ್ಯೆ. ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸಂಬಂಧಿತ ಯೋಜನೆ ಪ್ರಸ್ತಾವ ಇಂಧನ ಸಚಿವರ ಮುಂದಿದೆ. ಅಂತೆಯೇ ತುಮಕೂರಿನಲ್ಲಿಯೂ ಕೂಡ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸಲಾಗುವುದು ಎಂದರು. ಹಿರೇಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಸಂಪರ್ಕಿಸುವ ಕೇಂದ್ರದ ರಸ್ತೆ ಯೋಜನೆಗೆ ನಮ್ಮ ಸಂಪೂರ್ಣ ಸಹಕಾರವಿದ್ದು, ತುಮಕೂರು ನಗರದ ಅಭಿವೃದ್ಧಿಯ ದೃಷ್ಟಿಯಿಂದ ಈ ಯೋಜನೆಗೆ ಪೂರಕವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ಉದ್ಘಾಟನೆ ಹೊರತುಪಡಿಸಿ ಇಂದು ಒಂದೇ ದಿನ 645 ಕೋಟಿ ರೂ.ಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ ಎಂಬುದನ್ನು ಮನಗಾಣಬೇಕು ಎಂದರು.